ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕಸಾಪುರ ಗ್ರಾಮದಲ್ಲಿ MPLAD ಯೋಜನೆಯಡಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಉದ್ಘಾಟಿಸಿದರು.
ಕಸಾಪುರ ಗ್ರಾಮದಲ್ಲಿರುವ ಈ ಕೇಂದ್ರವು ಸ್ವಸಹಾಯ ಗುಂಪುಗಳು(SHGs) ಮತ್ತು ರೈತರಿಗೆ ತಮ್ಮ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಯನ್ನು ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳ(FPOs) ಮೂಲಕ ತರಬೇತಿ ನೀಡುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ನಬಾರ್ಡ್) ಸಹಯೋಗದೊಂದಿಗೆ ಈ ಸೌಲಭ್ಯವನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಈ ಯೋಜನೆ, ತಂತ್ರಜ್ಞಾನ ಅಳವಡಿಸುವ ಮೂಲಕ ಹುಣಸೆ ಪಲ್ಪ್ ಹಾಗೂ ಬೀಜ ತೆಗೆಯಲ್ಪಟ್ಟ ಹುಣಸೆ ಹಣ್ಣನ್ನು ಶುದ್ಧ ಹಾಗೂ ಆರೋಗ್ಯಕರ ಪರಿಸರದಲ್ಲಿ ಉತ್ಪಾದಿಸಲು ಸಹಾಯಕವಾಗಿದ್ದು, ಇದರ ಮೂಲಕ ಗುಣಮಟ್ಟ ಸುಧಾರಿಸುವುದರ ಜೊತೆಗೆ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.
ವಿಜಯನಗರ ಜಿಲ್ಲೆಯ ಸುಮಾರು 55,000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಬೀಜ ಬೆಳೆದಿದ್ದು, ಈ ಉಪಕ್ರಮವು ಅನೇಕ ರೈತರಿಗೆ ನೇರ ಮತ್ತು ಪರೋಕ್ಷವಾಗಿ ಪ್ರಯೋಜನವಾಗುವ ಸಾಮರ್ಥ್ಯ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕೇಂದ್ರವು ವರ್ಷಕ್ಕೆ 400 ಮೆಟ್ರಿಕ್ ಟನ್ ಕಡಲೆಬೀಜ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, 575 ರೈತರಿಗೆ ನೇರ ಪ್ರಯೋಜನ ನೀಡುತ್ತದೆ ಹಾಗೂ 1,500ಕ್ಕೂ ಹೆಚ್ಚು ರೈತರಿಗೆ ಪರೋಕ್ಷ ಸಹಾಯ ಒದಗಿಸುತ್ತದೆ.
ಕೂಡ್ಲಿಗಿ ತಾಲೂಕಿನ ಮತ್ತೊಂದು ವೈಶಿಷ್ಟ್ಯವೆಂದರೆ ಹಳ್ಳಿಗಳ ಸುತ್ತಮುತ್ತಲಿನ ಹೊಲ ಮತ್ತು ರಸ್ತೆ ಬದಿಗಳಲ್ಲಿ ಬಹಳ ಪ್ರಮಾಣದಲ್ಲಿ ಹುಣಸೆ ಮರಗಳು ಕಂಡುಬರುತ್ತವೆ. ಪರಂಪರೆಯಿಂದಲೇ ಮಹಿಳೆಯರು ಈ ಹುಣಸೆ ಹಣ್ಣನ್ನು ಕಲ್ಲು ಅಥವಾ ಇತರೆ ಸಾಧನಗಳನ್ನು ಬಳಸಿ ಮರಗಳ ಕೆಳಗೆ ಕುಳಿತು ಪಾರಂಪರಿಕ ವಿಧಾನದಲ್ಲಿ ಸಂಸ್ಕರಿಸುತ್ತಿದ್ದರು ಎಂಂದು ಹೇಳಿದ್ದಾರೆ.