ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ( ಜಾತಿಗಣತಿ) ಸಮೀಕ್ಷೆಯಲ್ಲಿ ಭಾಗಿಯಾದರೆ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ವದಂತಿಗಳು ಕೆಲವು ಕಡೆ ಹಬ್ಬಿದ್ದು, ಜನರು ಸಮೀಕ್ಷೆಯಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರೇಷನ್ ಕಾರ್ಡ್ ರದ್ದಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಸಮೀಕ್ಷೆ ನಡೆಸಿದ ಬಳಿಕ ಜನರ ದತ್ತಾಂಶವನ್ನು ದಾಖಲಿಸಿ, ಆ ದತ್ತಾಂಶದ ಮೇರೆಗೆ ಸರ್ಕಾರಕ್ಕೆ ಬಹಳಷ್ಟು ಕಾರ್ಯಕ್ರಮ ರೂಪಿಸಲು ಅನುಕೂಲವಾಗಲಿದೆ. ಅಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನೂತನ ಯೋಜನೆಗಳನ್ನು ಜಾರಿಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಸಮೀಕ್ಷೆಯಿಂದ ಯಾರಿಗೆಲ್ಲಾ ಅನುಕೂಲ?
ಸಮೀಕ್ಷೆಯಿಂದ ಎಲ್ಲಾ ಜಾತಿ ಧರ್ಮದವರಿಗೂ ಸಮೀಕ್ಷೆಯಿಂದ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರದಿಂದ ಎಲ್ಲರಿಗೂ ಅನ್ವಯವಾಗುವಂತೆ ಸಮೀಕ್ಷೆ ನಡೆಸಲಾಗುತ್ತಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಮೀಕ್ಷೆಯ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ:
“ಸಮೀಕ್ಷೆಯ ವಿರುದ್ಧವಾಗಿ ಕರಪತ್ರ ಹಂಚುವುದು ಸಾಮಾಜಿಕ ವಿರೋಧಿ ಚಟುವಟಿಕೆಯಾಗಿದೆ. ಇದು ಆಡಳಿತ ಪಕ್ಷದ ವಿರುದ್ಧವಾಗಿ ನಡೆಯುತ್ತಿರುವ ಹುನ್ನಾರವಾಗಿದೆ. ಯಾವ ಸರ್ಕಾರ ಆಡಳಿತಕ್ಕೆ ಬಂದರೂ ಈ ಸಮೀಕ್ಷೆಯ ಉಪಯೋಗವಾಗುತ್ತದೆ. ಕೆಲವು ರಾಜಕೀಯ ಮುಖಂಡರು ಸಮೀಕ್ಷೆಯಿಂದ ಉಪಯೋಗವಾಗುವುದಿಲ್ಲ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗವೇ ಯಾಕೆ ಸಮೀಕ್ಷೆ ನಡೆಸುತ್ತಿದೆ?
“ಹಿಂದುಳಿದ ವರ್ಗಗಳ ಆಯೋಗವೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ ಎನ್ನುವುದು ಸತ್ಯ. ಈಗಾಗಲೇ ಹಿಂದುಳಿದ ವರ್ಗದವರ ದತ್ತಾಂಶ ನಮ್ಮಲ್ಲಿ ಇದ್ದರೂ ಅದು ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕೆ 2014ರ ಕಾಯ್ದೆಯ ಪ್ರಕಾರ ಎಲ್ಲಾ ಜಾತಿ, ಧರ್ಮದ ಜನರ ಜೀವನೋಪಾಯ ಈಗ ಹೇಗೆ ಬದಲಾಗಿದೆ ಎಂದು ತಿಳಿದುಕೊಳ್ಳಲು ಸಮೀಕ್ಷೆಯ ಮೂಲಕ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಕೇವಲ ಹಿಂದುಳಿದ ವರ್ಗದವರಿಗೆ ಮಾತ್ರ ಅಲ್ಲ. ಇದರಿಂದ ರಾಜ್ಯದ ಎಲ್ಲಾ ಜಾತಿ ಧರ್ಮದವರಿಗೂ ಅನುಕೂಲವಾಗಲಿದೆ. ಸಮೀಕ್ಷೆಯ ಬಳಿಕ ಎಲ್ಲಾ ಜಾತಿ ಧರ್ಮದವರ ದತ್ತಾಂಶವನ್ನು ಪ್ರತ್ಯೇಕಗೊಳಿಸಿ, ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿಕೊಡಲು ಅನುಕೂಲವಾಗುತ್ತದೆ. ಯಾರಾದರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದರೆ, ಆನ್‌ಲೈನ್ ಮುಖಾಂತರವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ.
ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಇಟ್ಟಿರುವುದು ಯಾಕೆ?
ಸಮೀಕ್ಷೆ ವಿರೋಧಿಸುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಮೀಕ್ಷೆಯಲ್ಲಿ 60 ಪ್ರಶ್ನೆಯಿದೆ ಎನ್ನುತ್ತಾರೆ, ಆದರೆ ಈ ಎಲ್ಲಾ ಪ್ರಶ್ನೆಯಲ್ಲಿ ಏನೇನಿದೆ ಎನ್ನುವುದನ್ನು ಹೇಳುತ್ತಾರೆಯೇ? ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಸಾಮಾಜಿಕ ಸೂಚಕಗಳು ಇರುತ್ತವೆ. ಕೇಂದ್ರ ಸರ್ಕಾರದಿಂದಾಗುವ ಸರ್ವೆ, ನೀತಿ ಆಯೋಗದ ಸರ್ವೆ, ಜನಸಂಖ್ಯೆ ಸರ್ವೆ ಇವೆಲ್ಲದರಲ್ಲೂ ಇದೇ ರೀತಿಯ ಪ್ರಶ್ನೆಗಳಿವೆ. ಆಯಾಯ ಭೌಗೋಳಿಕ ಪ್ರದೇಶದಲ್ಲಿರುವ ಸಮಸ್ಯೆಗಳ ಕುರಿತಾದ ಪ್ರಶ್ನೆಗಳು ಇರುತ್ತವೆ. ಇದರಿಂದ ಜನರ ಸಮಸ್ಯೆಗಳನ್ನು ತಿಳಿದುಕೊಂಡು ರಾಜ್ಯ ಸರ್ಕಾರಕ್ಕೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.