ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಇನ್ನು 2 ದಿನಗಳಷ್ಟೇ ಬಾಕಿ ಇದ್ದು, ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಆಗುವ ಗಾಯಗಳು ವಿಶೇಷವಾಗಿ ಕಣ್ಣಿಗೆ ಆಗುವ ಗಾಯಗಳ ಕುರಿತು ವೈದ್ಯರು ಕೆಲವು ಸಲಹೆ ಹಾಗೂ ಎಚ್ಚರಿಕೆಗಳನ್ನು ನೀಡಿದ್ದಾರೆ.
ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರರಾದ ಡಾ. ಅನಂತ್ ಭಂಡಾರಿ ಎಸ್ ಅವರು ಮಾತನಾಡಿ, ವಯಸ್ಕರ ಮೇಲ್ವಿಚಾರಣೆ ಅತ್ಯಗತ್ಯವಾಗಿದ್ದು, ಪಟಾಕಿ ಸಿಡಿಸುವಾಗ ರಕ್ಷಣಾತ್ಮಕ ಕನ್ನಡಕಗಳ ಧರಿಸಬೇಕು. ಇವು ಎಲ್ಲೆಡೆ ಲಭ್ಯವಿದೆ ಎಂದು ಹೇಳಿದ್ದಾರೆ.
ಕಣ್ಣಿನ ಕಪ್ಪು ಭಾಗವಾದ ಕಾರ್ನಿಯಾ ಗಡಿಯಾರದ ಗಾಜಿನಂತಿರುತ್ತದೆ. ಒಮ್ಮೆ ಅದಕ್ಕೆ ಹಾನಿಯಾದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು ಎಂದು ತಿಳಿಸಿದ್ದಾರೆ.
ಶಂಕರ ಕಣ್ಣಿನ ಆಸ್ಪತ್ರೆಯ ವೈದಯೆ ಪಲ್ಲವಿ ಜೋಶಿ ಅವರು ಮಾತನಾಡಿ, ಗಾಯವಾದಾಗ ಕಣ್ಣಿಗೆ ಹಾಲು, ತುಪ್ಪ, ಎಣ್ಣೆ ಅಥವಾ ಟ್ಯಾಪ್ ನೀರನ್ನು ಹಾಕಬಾರದು. ಟ್ಯಾಪ್ ನೀರಿನಿಂದ ಸೋಂಕು ಮತ್ತಷ್ಟು ಹೆಚ್ಚಾಗಬಹುದು. ಅದರ ಬದಲು 10-15 ನಿಮಿಷಗಳ ಕಾಲ ಶುದ್ಧ ನೀರು ಅಥವಾ ಲವಣಯುಕ್ತ ನೀರಿನಿಂದ ತಕ್ಷಣ ತೊಳೆಯಿರಿ. ವೈದ್ಯರ ಸಲಹೆ, ಚಿಕಿತ್ಸೆ ಪಡೆಯಿತಿ ಎಂದು ಹೇಳಿದ್ದಾರೆ.
ಪಟಾಕಿ ಸಿಡಿತದ ವೇಳೆ ಕಾರ್ನಿಯಾಗೆ ಸಮಸ್ಯೆಯಾದರೆ, ಅದು ಕಣ್ಣಿನ ದೃಷ್ಟಿಯ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ ಎಂದು ಭಂಡಾರಿಯವರು ಹೇಳಿದ್ದಾರೆ.