ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಅಳವಡಿಸಿದ್ದ ಬ್ಯಾನರ್ ಗಳು ಮತ್ತು ಭಗವಾಧ್ವಜಗಳನ್ನು ತೆಗೆದುಹಾಕಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು, ಸಂಘಟನೆ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ ಎಂಬ ನಿಯಮ ಜಾರಿಗೆ ತರಲು ನಿರ್ಧರಿಸಿದ ಸಮಯದಲ್ಲಿ ಆರ್‌ಎಸ್‌ಎಸ್ ಭಾನುವಾರ ಚಿತ್ತಾಪುರದಲ್ಲಿ 'ಪಥ ಸಂಚಲನ' ಕಾರ್ಯಕ್ರಮ ಆಯೋಜಿಸಿದ್ದು, ಇದು ತನ್ನ ಶಕ್ತಿ ಪ್ರದರ್ಶನವೆಂದು ಪರಿಗಣಿಸಲಾದ ರೂಟ್ ಮಾರ್ಚ್ ಆಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, "ಚಿತ್ತಾಪುರ ಭಾರತದಲ್ಲಿದೆಯೇ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ
ಸರ್ಕಾರಿ ಜಾಗದಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, 2013ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗಲೇ ಈ ಆದೇಶ ಹೊರಡಿಸಿದ್ದರು. ಈ ಆದೇಶ ಆರ್‌ಎಸ್‌ಎಸ್‌ಗೂ ಅನ್ವಯವಾಗುತ್ತದೆ. ಅದನ್ನೇ ನಾವು ಈಗ ನಾವು ಜಾರಿಗೊಳಿಸಿದ್ದೇವೆ, ಆಗ ವಿರೋಧ ಮಾಡದವರು ಈಗ ಯಾಕೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ರಾಜಕಾರಣ ಬಿಟ್ಟರೆ ಬೇರೇನೂ ಮಾಡಲು ಬರುವುದಿಲ್ಲ, ಈ ವಿಷಯದಲ್ಲಿ ಬಿಜೆಪಿ ಖಂಡಿತವಾಗಿಯೂ ರಾಜಕೀಯ ಮಾಡುತ್ತಿದೆ. ಜನರ ಬಡವರ ಪರ ಅವರು ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 'ಮತ ಕಳ್ಳತನ'ದ ತನಿಖೆಯನ್ನು ಎಸ್‌ಐಟಿ ತೀವ್ರಗೊಳಿಸಿದ್ದು, ಜಿಲ್ಲೆಯ ಮಾಜಿ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಿವಾಸದ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆಯಾಗಿದೆ. ಎಸ್ಐಟಿ ಅಧಿಕಾರಿಗಳು, ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಸುಭಾಷ್ ಗುತ್ತೆದಾರ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದೆ. ನಮಗೆ ಏನಾದರೂ ದುರುದ್ದೇಶವಿದ್ದರೆ, ಅದನ್ನು ನಮ್ಮ ಮನೆಯಿಂದ ದೂರ ಸುಟ್ಟುಹಾಕುತ್ತಿದ್ದೇವು. ಯಾರಾದರೂ ಅದನ್ನು ಮನೆಯ ಮುಂದೆ ಏಕೆ ಸುಟ್ಟು ಹಾಕುತ್ತಾರೆ?'' ಎಂದು ಗುತ್ತೆದಾರ್ ಪ್ರಶ್ನಿಸಿದ್ದಾರೆ.
27 ತಿಂಗಳುಗಳಿಂದ ವೇತನ ಸಿಗದ್ದಕ್ಕೆ ಬೇಸತ್ತು ವಾಟರ್ಮ್ಯಾನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದ್ದು, ಬೇಜವಾಬ್ದಾರಿತನದ ಆರೋಪದ ಮೇಲೆ ಪಿಡಿಒ ನನ್ನು ಅಮಾನತುಗೊಳಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮ ಪಂಚಾಯತ್'ನ ಉಸ್ತುವಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮೇಗೌಡ ಕೆ.ಎನ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಆದೇಶ ಹೊರಡಿಸಿದ್ದಾರೆ. ಹೊಂಗನೂರು ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕುಸನಾಯಕ, ನನಗೆ ರಜೆ ಕೊಡದೇ ಸತಾಯಿಸಿದ್ದಾರೆ. ವೇತನಕ್ಕೆ ಪಿಡಿಒ ರಾಮೇಗೌಡ ಸಹಿ ಹಾಕಿದರೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸಹಿ ಮಾಡುತ್ತಿರಲಿಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಶ್ರೀರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೃತ್ಯ ಎಸಗಿದ್ದ ವಿಘ್ನೇಶ್ ಹಾಗೂ ಆತನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಹರೀಶ್ ಇಬ್ಬರನ್ನೂ ಬಂಧಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯದಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯಲ್ಲಿ ಭಾಗಿಯಾದರೆ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ವದಂತಿಗಳು ಕೆಲವು ಕಡೆ ಹಬ್ಬಿದ್ದು, ಜನರು ಸಮೀಕ್ಷೆಯಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, “ರೇಷನ್ ಕಾರ್ಡ್ ರದ್ದಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಸಮೀಕ್ಷೆ ನಡೆಸಿದ ಬಳಿಕ ಜನರ ದತ್ತಾಂಶವನ್ನು ದಾಖಲಿಸಿ, ಆ ದತ್ತಾಂಶದ ಮೇರೆಗೆ ಸರ್ಕಾರಕ್ಕೆ ಬಹಳಷ್ಟು ಕಾರ್ಯಕ್ರಮ ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.