ಮೈಸೂರು: ಸರ್ಕಾರಿ ಜಾಗದಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶ ಹೊರಡಿಸಿದ್ದರು. ಈ ಆದೇಶ ಆರ್‌ಎಸ್‌ಎಸ್‌ಗೂ ಅನ್ವಯವಾಗುತ್ತದೆ. ಅದನ್ನೇ ನಾವು ಈಗ ನಾವು ಜಾರಿಗೊಳಿಸಿದ್ದೇವೆ, ಆಗ ವಿರೋಧ ಮಾಡದವರು ಈಗ ಯಾಕೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಾರ್ಗೆಟ್ ಆರ್ ಎಸ್ ಎಸ್ ಅಲ್ಲವೇ ಅಲ್ಲ, ಶಾಲಾ ಆವರಣದಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಸುತ್ತೋಲೆ ಹೊರಡಿಸಿದ್ದರು.
ಅದನ್ನೇ ನಾವೀಗ ಜಾರಿಗೊಳಿಸುತ್ತಿದ್ದೇವೆ. ಸರ್ಕಾರದ ಆದೇಶ ಕೇವಲ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ, ಎಲ್ಲಾ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೂ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳಲ್ಲಿ, ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಎಲ್ಲಾ ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ಬಿಜೆಪಿಯಿಂದ ರಾಜಕಾರಣ
ಬಿಜೆಪಿಯವರಿಗೆ ರಾಜಕಾರಣ ಬಿಟ್ಟರೆ ಬೇರೇನೂ ಮಾಡಲು ಬರುವುದಿಲ್ಲ, ಈ ವಿಷಯದಲ್ಲಿ ಬಿಜೆಪಿ ಖಂಡಿತವಾಗಿಯೂ ರಾಜಕೀಯ ಮಾಡುತ್ತಿದೆ. ಜನರ ಬಡವರ ಪರ ಅವರು ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.
ಏನಿದು ಚಿತ್ತಾಪುರ ಘಟನೆ?
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸಿದ್ದ ಪಥ ಸಂಚಲನಕ್ಕಾಗಿ ಅಳವಡಿಸಲಾಗಿದ್ದ ಅಲಂಕಾರಿಕ ಕೇಸರಿ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಶುಕ್ರವಾರ ತಡರಾತ್ರಿ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ವಿಜಯ ದಶಮಿ ಉತ್ಸವ ಹಾಗೂ RSS ನ 100ನೇ ವರ್ಷದ ಸಂಭ್ರಮಾಚರಣೆಗಾಗಿ ಈ ಸಿದ್ಧತೆಗಳನ್ನು ಮಾಡಲಾಗಿತ್ತು. ಪರವಾನಗಿ ಇಲ್ಲದೆ ಅಳವಡಿಸಲಾಗಿದೆ ಎಂಬ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ.
ಗುತ್ತಿಗೆದಾರರ ಬಾಕಿ- ಸಂಬಂಧಪಟ್ಟ ಸಚಿವರಿಂದ ಕ್ರಮ
ಗುತ್ತಿಗೆದಾರರ ಬಾಕಿ ಪಾವತಿಯಾಗದಿದ್ದರೆ ಮಾನ್ಯ ರಾಜ್ಯಪಾಲರನ್ನು ಭೇಟಿಮಾಡುವುದಾಗಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ
ಮೈಸೂರಿನ ಉದ್ಯೋಗ ಮೇಳ ಯಶಸ್ವಿಯಾಗಿರುವ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ, ನಿನ್ನೆಯ ಉದ್ಯೋಗ ಮೇಳ ಯಶಸ್ವಿಯಾಗಿ ನೆರವೇರಿದ್ದು, ಈ ಕಾರ್ಯಕ್ರಮವನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.