ಬೆಂಗಳೂರು: ಯಾವುದೇ ಖಾಸಗಿ ಸಂಸ್ಥೆ, ಸಂಘ ಅಥವಾ ವ್ಯಕ್ತಿಗಳ ಗುಂಪು ಸರ್ಕಾರಿ ಆಸ್ತಿ ಅಥವಾ ಆವರಣವನ್ನು ಬಳಸಲು ಪೂರ್ವಾನುಮತಿ ಕಡ್ಡಾಯಗೊಳಿಸುವ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಸಮರ್ಥಿಸಿಕೊಂಡರು ಮತ್ತು ಹಿಂದಿನ ಬಿಜೆಪಿ ಆಡಳಿತಲ್ಲಿನ ಆದೇಶಗಳನ್ನು ಈಗ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಶನಿವಾರ ಹೊರಡಿಸಲಾದ ಸರ್ಕಾರದ ಆದೇಶವು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದರು.
'ನಾವು ಯಾರ ಬಗ್ಗೆಯೂ (ನಿರ್ದಿಷ್ಟವಾಗಿ) ಮಾತನಾಡಿಲ್ಲ. ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಸರ್ಕಾರವು ಕೆಲವು ಆದೇಶಗಳನ್ನು ಮಾಡಿತ್ತು. ಆ ಆದೇಶಗಳನ್ನು ಜಾರಿಗೆ ತರಲು ನಾವು ಅದನ್ನು ಮರು ವ್ಯಾಖ್ಯಾನಿಸಿದ್ದೇವೆ. ನಾವು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಬಿಜೆಪಿ ಸರ್ಕಾರ ಮಾಡಿದ ಆದೇಶಗಳನ್ನು ನಾವು ಕಾರ್ಯರೂಪಕ್ಕೆ ತಂದಿದ್ದೇವೆ' ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶನಿವಾರದ ಸರ್ಕಾರಿ ಆದೇಶವು ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಅನ್ನು ಹೆಸರಿಸದಿದ್ದರೂ, ಆದೇಶದ ನಿಬಂಧನೆಗಳು ಸಂಘಟನೆಯ ರೂಟ್ ಮಾರ್ಚ್‌ಗಳು ಸೇರಿದಂತೆ ಅದರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಗುರಿಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಕೋರಿ ಪಂಚಾಯತ್ ರಾಜ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಆಧರಿಸಿ ಗುರುವಾರ ನಡೆದ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಆಧಾರದ ಮೇಲೆ ಈ ಆದೇಶ ಹೊರಡಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಅಕ್ಟೋಬರ್ 4 ರಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಮೈದಾನಗಳಲ್ಲಿ ತನ್ನ 'ಶಾಖೆ'ಗಳನ್ನು ನಡೆಸುತ್ತಿದೆ. ಅಲ್ಲಿ 'ಮಕ್ಕಳು ಮತ್ತು ಯುವಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳನ್ನು ತುಂಬಲಾಗುತ್ತಿದೆ' ಎಂದು ಆರೋಪಿಸಿದ್ದರು.