ಕಲಬುರಗಿ: ಸರ್ಕಾರಿ ಕೆಲಸದಲ್ಲಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಅಂತಹವರನ್ನು ಕೆಲಸದಿಂದ ಅಮಾನತು ಮಾಡುತ್ತಿದೆ. ಹೀಗಿದ್ದರೂ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ನಡೆದ RSS ಪಥಸಂಚಲನದಲ್ಲಿ ಓರ್ವ ಸರ್ಕಾರಿ ವೈದ್ಯಾಧಿಕಾರಿ ಮತ್ತು ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದಾರೆ. ಸೇಡಂ ತಾಲೂಕಿನ ಆಡಳಿತ ವೈದ್ಯಾಧಿಕಾರಿಯಾದ ನಾಗರಾಜ್ ಅವರು RSS ಗಣವೇಷ ಧರಿಸಿ ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ. RSS ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಈ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಅಕ್ಟೋಬರ್ 12 ರಂದು ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಭಾಗವಹಿಸಿದ್ದಕ್ಕಾಗಿ ಅವರನ್ನೂ ಅಮಾನತುಗೊಳಿಸಲಾಗಿತ್ತು.