ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸುತ್ತಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮತ್ತಿತರ ಉದ್ಯಮಿಗಳ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಕೋರಮಂಗಲದ ವೀರಯೋಧರವನ ಪಾರ್ಕ್‌ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಕಾರ್ಯಕ್ರಮದ ನಂತರ ‘ನಾಗರಿಕರೊಂದಿಗೆ ಸಂವಾದ’ದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ವ್ಯಾಪಾರ ಆರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು ಈಗ ಬೆಂಗಳೂರಿನ ಬಗ್ಗೆ ಟೀಕಿಸಿ ಟ್ವೀಟ್ ಮಾಡುತ್ತಿದ್ದಾರೆ. ನಿಮ್ಮ ಬೇರುಗಳನ್ನು ಮರೆತರೆ, ನೀವು ಹಣ್ಣುಗಳನ್ನು ಪಡೆಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಇಲ್ಲಿ ಉದ್ಯೋಗ ಪ್ರಾರಂಭ ಮಾಡಿದವರು ದೊಡ್ಡವರಾಗಿದ್ದಾರೆ. ನಾವು ಮೊದಲು ಹೇಗಿದ್ವಿ ಅನ್ನೋದನ್ನು ಮರೆತು ಮಾತನಾಡುತ್ತಿದ್ದಾರೆ. ನಾವು ಬಂದ ಮೂಲ ಹೇಗಿತ್ತು. ದೊಡ್ಡವರು ಹೇಗಾದ್ವಿ? ಇದನೆಲ್ಲಾ ಮರೆತು ಟ್ವೀಟ್ ಮಾಡ್ತಾರೆ. ಮೆಸೇಜ್ ಹಾಕ್ತಿದ್ದಾರೆ. ಇದಕ್ಕೆಲ್ಲಾ ನಾನು ಉತ್ತರ ಕೊಡುತ್ತೇನೆ ಎಂದರು.
ಆದಾಗ್ಯೂ, ಟೀಕೆಗಳನ್ನು ಸ್ವಾಗತಿಸಿದ ಡಿಕೆ ಶಿವಕುಮಾರ್, ಇದು ಪ್ರಜಾಪ್ರಭುತ್ವದ ಮೌಲ್ಯವಾಗಿದೆ ಎಂದು ಹೇಳಿದರು. ಸಚಿವರಾದ ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರೊಂದಿಗೆ ಐಟಿ/ಬಿಟಿ ಕಂಪನಿಗಳ ಸಿಇಒಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅವರ ಸಮಸ್ಯೆಗಳು ಮತ್ತು ಮನವಿಗಳನ್ನು ಆಲಿಸುವುದಾಗಿ ಅವರು ತಿಳಿಸಿದರು.
ನಗರದಲ್ಲಿ ಹೆಚ್ಚುತ್ತಿರುವ ಮೂಲಸೌಕರ್ಯಗಳ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಬೃಹತ್ ಅಭಿವೃದ್ಧಿ ಯೋಜನೆಯನ್ನು ಘೋಷಿಸಿದರು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ, ನಾವು ಮುಂದಿನ 3 ರಿಂದ 4 ವರ್ಷಗಳಲ್ಲಿ 1.04 ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿದ್ದೇವೆ ಎಂದು ಅವರು ಹೇಳಿದರು.