ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದೀಪಾವಳಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಮಾಹಿತಿಯ ಪ್ರಕಾರ, ಹಬ್ಬದ ಮೊದಲ ದಿನದಂದು ನಗರದ ಗಾಳಿಯ ಗುಣಮಟ್ಟ ಮತ್ತು ಶಬ್ದ ಮಾಲಿನ್ಯದ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ.
ಅಕ್ಟೋಬರ್ 20 ರಂದು, ನಗರವು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 77 ಅನ್ನು ದಾಖಲಿಸಿದೆ, ಇದು 2024 ರಲ್ಲಿ 153 ರಷ್ಟಿತ್ತು, ಇದರಿಂದ ಮಾಲಿನ್ಯ ಮಟ್ಟದಲ್ಲಿ ಶೇ.98 ರಷ್ಟು ಇಳಿಕೆಯಾಗಿರುವುದು ಕಂಡು ಬಂದಿದೆ.
ಹೆಬ್ಬಾಳ, ನಿಮ್ಹಾನ್ಸ್ ಮತ್ತು ಸಿಲ್ಕ್ ಬೋರ್ಡ್‌ನಲ್ಲಿರುವ ಮೇಲ್ವಿಚಾರಣಾ ಕೇಂದ್ರಗಳು ಮಾಲಿನ್ಯ ಮಟ್ಟದಲ್ಲಿ ಕಡಿಮೆಯಾಗಿರುವುದಾಗಿ ತಿಳಿಸಿದೆ.
ನಗರದ ರೈಲು ನಿಲ್ದಾಣದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 2024 ರಲ್ಲಿ 130 ರಿಂದ 2025 ರಲ್ಲಿ 104 ಕ್ಕೆ ಇಳಿದಿದೆ, ನಿಮ್ಹಾನ್ಸ್'ನಲ್ಲಿ 121 ರಿಂದ 44 ಕ್ಕೆ, ಹೆಬ್ಬಾಳದಲ್ಲಿ, 263 ರಿಂದ 74ಕ್ಕೆ ಇಳಿಕೆಯಾಗಿದೆ.
ಆರು ಕೇಂದ್ರಗಳಿಂದ ಶಬ್ದ ಮಾಲಿನ್ಯ ಮಟ್ಟಗಳ ದತ್ತಾಂಶ ಕೂಡ ಶಬ್ಧ ಮಾಲಿನ್ಯ ಕಡಿಮೆಯಾಗಿರುವುದಾಗಿ ಮಾಹಿತಿ ನೀಡಿವೆ,
2024 ರಲ್ಲಿ 68.6 ಡೆಸಿಬಲ್ (dB) ಇದ್ದ ಶಬ್ಧ ಮಟ್ಟವು ಈ ಬಾರಿ 63.95 ಡೆಸಿಬಲ್'ಗೆ ಇಳಿಕೆಯಾಗಿದೆ. ಇದು ಶಬ್ಧ ಮಾಲಿನ್ಯ ಸ್ವಲ್ಪ ಇಳಿಕೆಯಾಗಿರುವುದನ್ನು ತೋರಿಸುತ್ತಿದೆ.
ಬಸವೇಶ್ವರನಗರ ಮತ್ತು ಬಿಟಿಎಂ ಲೇಔಟ್‌ನಲ್ಲಿ ಶಬ್ದ ಮೇಲ್ವಿಚಾರಣಾ ಕೇಂದ್ರಗಳು ಗಮನಾರ್ಹ ಕುಸಿತವನ್ನು ದಾಖಲಿಸಿವೆ. ಯಶವಂತಪುರ ಮತ್ತು ದೊಮ್ಮಲೂರಿನಲ್ಲಿ ಮಾತ್ರ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.
ಕೆಎಸ್‌ಪಿಸಿಬಿ ಸದಸ್ಯ-ಕಾರ್ಯದರ್ಶಿ ಎಸ್‌ಎಸ್ ಲಿಂಗರಾಜ ಅವರು ಮಾತನಾಡಿ, ದೀಪಾವಳಿಯ ಮೊದಲ ದಿನದಂದು ನಗರದಲ್ಲಿ ಗಾಳಿಯ ಗುಣಮಟ್ಟದಲ್ಲಿ ಸಕಾರಾತ್ಮಕ ಪ್ರವೃತ್ತಿಯ ದತ್ತಾಂಶವು ತೋರಿಸಿದೆ ಎಂದು ಹೇಳಿದ್ದಾರೆ.
ಮಾನದಂಡಗಳ ಕಟ್ಟುನಿಟ್ಟಿನ ಜಾರಿ ಮತ್ತು ಜಾಗೃತಿ ಅಭಿಯಾನಗಳಿಂದಾಗಿ ಈ ಬೆಳವಣಿಗೆ ಕಂಡು ಬಂದಿದ್ದು, ಹಸಿರು ಪಟಾಕಿಗಳು ಇಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ ಎಂದು ತಿಳಿಸಿದ್ದಾರೆ.