ಬೆಂಗಳೂರು: ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿತದಿಂದ ಸಂಭವಿಸಿದ ಗಾಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಪ್ರತೀ ವರ್ಷದಂತೆ ಈ ಬಾರಿಯೂ ಗಾಯಗೊಂಡವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಟಾಕಿ ಸಿಡಿತದಿಂದ ಗಾಯಗೊಂಲು ಮಿಂಟೋ ನೇತ್ರ ಆಸ್ಪತ್ರೆಗೆ ಸೋಮವಾರ 16 ಜನರು ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ 4 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಮೂವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದೀಪಾವಳಿ ಹಬ್ಬದ ದಿನದ ರಾತ್ರಿ ಮತ್ತು ಮರುದಿನ ಆರು ಮಕ್ಕಳು, 10 ಮಂದಿ ವಯಸ್ಕರು ಸೇರಿದಂತೆ 16 ಪ್ರಕರಣಗಳಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾರೆ. ಕೆಲವರಿಗೆ ಹೊಲಿಗೆ ಹಾಕುವ ಅಗತ್ಯವಾಗಿತ್ತು. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. 12 ವರ್ಷದ ಬಾಲಕನ ಕಣ್ಣಿನ ಕಾರ್ನಿಯ ಸಂಪೂರ್ಣವಾಗಿ ಹಾನಿಗೊಳಾಗಿದ್ದು, ಆಂತರಿಕ ರಕ್ತಸ್ರಾವವಾಗಿತ್ತು. ದೇವಾಲಯದ ಬಳಿ ನಡೆದು ಹೋಗುತ್ತಿದ್ದ 34 ವರ್ಷದ ವ್ಯಕ್ತಿಯ ಕಣ್ಣಿಗೆ ತೀವ್ರ ಗಾಯವಾಗಿದ್ದು, ಅವರನ್ನು ನಿಕಟ ವೀಕ್ಷಣೆಯಲ್ಲಿ ಇರಿಸಲಾಗಿದೆ.
ಈ ಗಾಯಗಳಿಗೆ ಕಾರ್ನಿಯಲ್ ಹೊಲಿಗೆ ಮತ್ತು ಇತರ ವಿಧಾನಗಳ ಮೂಲಕ ಚಿಕಿತ್ಸೆ ನೀಡಬೇಕಾಗಿದೆ, ಆದರೆ ಇಷ್ಟೆಲ್ಲಾ ಮಾಡಿದ ನಂತರವೂ, ದೃಷ್ಟಿ ಮರಳಿ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇದೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ ಗ್ಲುಕೋಮಾ ಡಾ. ಲಲಿತಾ ಕೆ.ಜೆ ಅವರು ಹೇಳಿದ್ದಾರೆ.
ಇದು ತೀವ್ರತರ ಗಾಯವಾಗಿದೆ. ಇಂತಹ ಗಾಯದಿಂದ ಬಳುತ್ತಿರುವ ಮಕ್ಕಳು ಭಾಗಶಃ ಅಥವಾ ದೃಷ್ಟಿ ಇಲ್ಲದೆ ಜೀವಿತಾವಧಿಯವರೆಗೆ ಬದುಕಬೇಕಾಗಬಹುದು ಎಂದು ತಿಳಿಸಿದ್ದಾರೆ.
2 ವರ್ಷದ ಮಗು ಪಟಾಕಿ ಸೇವಿಸಿರುವ ಪ್ರಕರಣವೊಂದು ರಾಮಯ್ಯ ಆಸ್ಪತ್ರೆಗೆ ದಾಖಲಾಗಿದೆ. ಪಟಾಕಿ ಸಿಡಿತದಿಂದ 31 ವರ್ಷದ ಮಹಿಳೆ ಗಾಯಗೊಂಡಿದ್ದು, ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 11-17 ವರ್ಷದ ಮೂವರು ಮಕ್ಕಳು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಸಣ್ಣ-ಪುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಗಂಭೀರ ಪ್ರಕರಣಗಳಲ್ಲಿ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ನಮ್ಮಲ್ಲಿ ಆಸ್ಪತ್ರೆಗೆ ದಾಖಲಾಗಿರುವ 16 ಮಂದಿಯ ಪೈಕಿ 12 ಮಂದಿ ಮಕ್ಕಳಾಗಿದ್ದಾರೆ. ಈ ಬಾರಿ ವಯಸ್ಕರಿಗಿಂದ ಮಕ್ಕಳ ಮೇಲೆ ಪಟಾಕಿ ಹೆಚ್ಚು ಪರಿಣಾಮ ಬೀರಿದೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ ಸೇವೆಗಳ ಹಿರಿಯ ಸಲಹೆಗಾರ್ತಿ ಡಾ. ಪಲ್ಲವಿ ಜೋಶಿ ಅವರು ಹೇಳಿದ್ದಾರೆ.
ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ರಕ್ಷಣಾತ್ಮಕ ಕನ್ನಕಗಳು ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪಟಾಕಿಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದನ್ನು ಕಲಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ.