ಕೊಪ್ಪಳ: ಮರಳು ಮಾಫಿಯಾ ವಿರುದ್ಧ ಮುಖ್ಯಮಂತ್ರ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಪತ್ರ ಬೆನ್ನಲ್ಲೇ ಅಧಿಕಾರಿಗಳೂ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿರುಗೇಟು ನೀಡಿದ್ದಾರೆ.
ರಾಯರೆಡ್ಡಿ ಅವರು ಅಧಿಕಾರಿಗಳ ವಿರುದ್ಧ ಬರೆದ ಪತ್ರಕ್ಕೆ ಪ್ರತಿಯಾಗಿ, 20 ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳೂ ಕೂಡ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆಂದು ತಿಳಿದುಬಂದಿದೆ.
ಈ ಅನಾಮಧೇಯ ಪತ್ರ ಇದೀಗ ವೈರಲ್ ಆಗಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಗಳ ಕಚೇರಿ ಎರಡೂ ಪತ್ರಗಳ ಕುರಿತು ತನಿಖೆ ಆರಂಭಿಸಿದೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ರಾಯರೆಡ್ಡಿಯವರು, ಮರಳು ಮಾಫಿಯಾ ನಡೆಸುತ್ತಿರುವವರು ಹಾಗೂ ಅವರಿಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಭ್ರಷ್ಟ ಅಧಿಕಾರಿಗಳು ಮತ್ತು ಮರಳು ಮಾಫಿಯಾ ದಂಧೆಕೋರರು ಇಬ್ಬರೂ ಕೈಜೋಡಿಸಿ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ. ನಾವು ಆದಾಯ ತೆರಿಗೆ ಮತ್ತು ಜಿಎಸ್‌ಟಿಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಾಧ್ಯವಾಗುತ್ತಿರುವುದಾದರೆ, ಮರಳಿನ ಮೇಲೆ ರಾಯಧನವನ್ನೇಕೆ ವಸೂಲಿ ಮಾಡಬಾರದು. ನಿರ್ಮಾಣದಲ್ಲಿ ಬಳಸುವ ಮರಳಿಗೆ ಮನೆಮಾಲೀಕರು ನೇರವಾಗಿ ಸರ್ಕಾರಕ್ಕೆ ರಾಯಧನ ಪಾವತಿಸುವ ಸರಳ, ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ಮೂಲಕ ಮಧ್ಯವರ್ತಿಗಳು ಮತ್ತು ಮಾಫಿಯಾವನ್ನು ಕೊನೆಗೊಳಿಸಬೇಕೆಂದು ಹೇಳಿದ್ದರು.
ಅಕ್ರಮ ಮರಳು ಗಣಿಗಾರಿಕೆಯಿಂದ ಸಾರ್ವಜನಿಕ ಖಜಾನೆಗೆ ಭಾರಿ ನಷ್ಟವಾಗುತ್ತಿದೆ, ಕೊಪ್ಪಳ ಜಿಲ್ಲೆಯಲ್ಲಿಯೇ 150-200 ಲಾರಿಗಳು ಕಾರ್ಯಾಚರಣೆ ನಡೆಸುತ್ತಿವೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳು ದಾಖಲಾಗಿವೆ. 200 ಕ್ಕೂ ಹೆಚ್ಚು ಜನರು ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.
ಇದರ ಬೆನ್ನಲ್ಲೇ ಅಧಿಕಾರಿಗಳು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ರಾಯರೆಡ್ಡಿಯವರಿಗೆ 20 ಪ್ರಶ್ನೆಗಳನ್ನು ಕೇಳಿದ್ದಾರೆ.
ಆ ಪತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಆ ಪತ್ರದ ‘ಇಂದ’ ಎಂಬಲ್ಲಿ ಕೊಪ್ಪಳ ಅಧಿಕಾರಿಗಳ ವೃಂದ ಎಂದು ಬರೆಯಲಾಗಿದೆ. ಆದರೆ, ಆ ಪತ್ರಕ್ಕೆ ಯಾವುದೇ ಅಧಿಕಾರಿಯ ಸಹಿ ಇಲ್ಲ. ಈ ಪತ್ರದಲ್ಲಿ ರಾಯರೆಡ್ಡಿಯವರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಸಿಎಂ ಆರ್ಥಿಕ ಸಲಹೆಗಾರರಾಗಿ ತಾವೇ ಕೆಲ ಯೋಜನೆಗಳಿಗೆ ರಾಜಧನ ವಿನಾಯಿತಿ ನೀಡಿರುವುದು ಎಷ್ಟು ಸರಿ? ಕುಕನೂರ ಬೈಪಾಸ್ ರಸ್ತೆಗೆ ಬಳಸಲಾಗುತ್ತಿರುವ ಮರಳಿಗೆ ರಾಜಧನ ಪಾವತಿ ಮಾಡಲು ನೀಡಿರುವ ಸೂಚನೆ ಭ್ರಷ್ಟಾಚಾರವೇ? ಶಾಸಕರ ಸಂಬಂಧಿಗಳ ಹೆಸರಿನಲ್ಲಿ ಶಿರೂರ್ ಪ್ರದೇಶದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಲ್ಲಿ ಉಲ್ಲಂಘನೆಗಳಿಲ್ಲವೇ? ಮರಳು ಗಣಿಗಾರಿಕೆಯಿಂದ ಸರ್ಕಾರದ ಖಜಾನೆಗೆ ನಷ್ಟ ಉಂಟಾಗುತ್ತಿಲ್ಲವೇ? ಎಂದು ಪ್ರಶ್ನೆಗಳನ್ನು ಮಾಡಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.