ಬೆಂಗಳೂರು: ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಕಾರ್ತಿಕ್, ಗ್ಲೆನ್ ಮತ್ತು ಸಿಯೋಗ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಂಗೊಂಡನಹಳ್ಳಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಮನೆಯಲ್ಲಿ ಇಬ್ಬರು ಮಹಿಳೆಯರು, ಇಬ್ಬರು ವಯಸ್ಕರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಇದ್ದರು. ಆದರೂ, ಮನೆಗೆ ಬಂದ ಐವರು ಬಾಗಿಲು ತೆರೆಯುವಂತೆ ಕೇಳಿದರು. ಆನಂತರ ಭಯಗೊಂಡು ಸಂತ್ರಸ್ತೆ ಬಾಗಿಲು ತೆರೆದಿದ್ದಾರೆ.
ಈ ವೇಳೆ ತಾವು ಪೀಣ್ಯ ಪೊಲೀಸರ ಇನ್ಫಾರ್ಮರ್ಸ್ ಎಂದು ಹೇಳಿಕೊಂಡ ದುಷ್ಕರ್ಮಿಗಳು, ನಿಮ್ಮ ಮನೆಯಲ್ಲಿ ಗಾಂಜಾ ಮಾರಾಟ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ದಾಳಿಯ ನಾಟಕವಾಡಿದ್ದಾರೆ.
ಮನೆಯಲ್ಲಿದ್ದ ಇಬ್ಬರು ಪುರುಷರನ್ನು ಕಟ್ಟಿಹಾಕಿದ ನಂತರ, ಸಂತ್ರಸ್ತ ಮಹಿಳೆಯ 14 ವರ್ಷದ ಮಗ ಹಾಗೂ ಆಕೆಯ ಸ್ನೇಹಿತೆಯ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ, ಮಹಿಳೆಯನ್ನು ಪಕ್ಕದ ಕೋಣೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.