ಹಾಸನ: ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಗರ್ಭಗುಡಿ ಬಾಗಿಲು ಬಂದ್ ಮಾಡುವುದಕ್ಕೂ ಮುನ್ನ ಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೆಂಡೋತ್ಸವ ಸಂಭ್ರಮದಿಂದ ಜರುಗಿತು.
ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಲತಾ ಕುಮಾರಿ ಸಹ ಕೆಂಡ ಹಾಯ್ದು ಭಕ್ತಿ ಭಾವ ಮೆರೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಹಾಸನಾಂಬೆ ದೇವಾಲಯ ಆವರಣದಲ್ಲಿ ಇಂದು ಬೆಳಗ್ಗೆ ನಡೆದ ಕೆಂಡೋತ್ಸವದಲ್ಲಿ ಗುಲಾಬಿ ಬಣ್ಣದ ಚೂಡಿದಾರ್ ಧರಿಸಿಯೇ ಜಿಲ್ಲಾಧಿಕಾರಿ ಕೆಂಡ ಹಾಯ್ದುರು. ಉರಿಯುತ್ತಿದ್ದ ಕೆಂಡದಲ್ಲಿ ಸಾಗಲು ಭಕ್ತರೊಬ್ಬರು ಜಿಲ್ಲಾಧಿಕಾರಿಗೆ ನೆರವಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕಳಶ ಹೊತ್ತ ಭಕ್ತರು ಕೆಂಡ ಹಾಯ್ದಿದ್ದು ನೋಡಿ ನನಗೂ ಕೆಂಡ ಹಾಯುವ ಇಂಗಿತ ಬಂತು. ನಾನೆಂದೂ ಕೆಂಡ ಹಾಯ್ದಿರಲಿಲ್ಲ. ಮೊದಲಿಗೆ ಭಯ ಇತ್ತು. ಆದರೆ ದೇವರ ಮೇಲಿನ ಭಕ್ತಿಯಿಂದ ಕೈ ಮುಗಿದು ಹೋದೆ. ಏನೂ ಆಗಲಿಲ್ಲ ಎಂದು ಅವರು ನಂತರ ಅನುಭವ ಹಂಚಿಕೊಂಡರು.
ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಇಂದು ಮಧ್ಯಾಹ್ನ 1:06ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಬಂದ್ ಆಯಿತು. ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಅಂತಿಮ ಪೂಜೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಸಮ್ಮುಖದಲ್ಲಿ ಗರ್ಭಗುಡಿಗೆ ಅರ್ಚಕರು ಬೀಗ ಹಾಕಿದರು. ಈ ಬಾರಿಯ ಪ್ರತಿನಿತ್ಯ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಅನೇಕ ಮಂದಿ ದೇವಿ ದರ್ಶನ ಪಡೆದಿದ್ದಾರೆ.