ಅಕ್ಟೋಬರ್ 28 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರೂಟ್ ಮಾರ್ಚ್‌ನ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಆರ್‌ಎಸ್‌ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಚಿತ್ತಾಪುರ ಪಟ್ಟಣದಲ್ಲಿ ಕೆಲವು ರೀತಿಯ ಉದ್ವಿಗ್ನತೆ ಉಂಟಾಗಿದೆ ಎಂದು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಗಮನಿಸಿ, ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಬೇಕು. ಅಕ್ಟೋಬರ್ 30ರಂದು ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಆಧಾರದ ಮೇಲೆ ಹೈಕೋರ್ಟ್ ತೀರ್ಪು ನೀಡಲಿದೆ.
ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಕನಿಷ್ಠ 21 ಜನರು ಮೃತಪಟ್ಟಿದ್ದಾರೆ. ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರ ಚಿನ್ನತೇಕೂರು ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ತುರ್ತು ನಿರ್ಗಮನ ಮತ್ತು ಕಿಟಕಿ ಗಾಜುಗಳನ್ನು ಒಡೆದು 21 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಪರಿಣಾಮವಾಗಿ ಬೈಕ್ ವಾಹನದ ಕೆಳಗೆ ಸಿಲುಕಿಕೊಂಡು, ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಈ ದುರಂತದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ನೆಲ್ಲೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ದುರ್ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ನೀಡಿರುವ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯತೀಂದ್ರ ಈ ತರ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಬಾರದು. ಈ ರೀತಿಯ ಬಾಲಿಶ ಹೇಳಿಕೆ ನೀಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಯತೀಂದ್ರ ವಿರುದ್ಧ ಶಿವಗಂಗಾ ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಎಚ್. ಎ. ಇಕ್ಬಾಲ್ ಹುಸೇನ್, ಸಿಎಂ ಬದಲಾವಣೆ ವಿಚಾರ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಟ್ತಾರೆ. ಅಂದ್ರೆ ನಾವು ಮಾಡಿದ್ರೆ, ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಈ ವಿಷಯ ಕುರಿತು ಯಾರೊಂದಿಗೆ ಮಾತನಾಡಬೇಕೊ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
2023 ರ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ತಾಂತ್ರಿಕ ವಿವರ ಕೋರಿ ಗುರುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಫೆಬ್ರವರಿ 2022 ಮತ್ತು ಫೆಬ್ರವರಿ 2023 ರ ನಡುವೆ ಆಳಂದ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು 6,018 ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸಲು ಬಳಸಲಾಗಿರುವ ಪೋರ್ಟ್‌ಗಳು, ಐಪಿ ವಿಳಾಸಗಳು ಮತ್ತು ಒಟಿಪಿಗಳಂತಹ ವಿವರಗಳನ್ನು ಎಸ್ ಐಟಿ ಕೋರಿದ್ದು, ಉತ್ತರಕ್ಕಾಗಿ ಕಾಯುತ್ತಿದೆ. ಎಸ್ಐಟಿ ಈಗಾಗಲೇ ಕಲಬುರಗಿಯಲ್ಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯಲ್ಲಿ ಒಟ್ಟು 27,607.26 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಎಂದು ಸಭೆ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ. ಇನ್ನು ಸಾರ್ವಜನಿಕ ವಲಯದ KSDL 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಶುಕ್ರವಾರ ಸರಕಾರಕ್ಕೆ ಹಸ್ತಾಂತರಿಸಿದೆ.