ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಭಾನುವಾರ ಮುಂಜಾನೆ ಭೂಕಂಪನದ ಅನುಭವವಾಗಿದೆ. ಇಂದು ಬೆಳಗಿನ ಜಾವ 3-42 ಗಂಟೆಗೆ ಲಘು ಭೂಕಂಪದ ಅನುಭವದಿಂದ ಜನರು ಕೆಲಕಾಲ ಆತಂಕಕ್ಕೊಳಗಾದರು.
ಚಿಟಗುಪ್ಪಾ ತಾಲೂಕಿನ ಭಾಸ್ಕರ್‌ನಗರ ಹಳ್ಳಿಯಲ್ಲಿ ಭೂಮಿ ಕಂಪಿಸಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಭೂಕಂಪನ ಕೇಂದ್ರ ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ 2.9 ಪ್ರಮಾಣದಲ್ಲಿ ಕಂಪನದ ತೀವ್ರತೆ ದಾಖಲಾಗಿದೆ.
ಭಾಸ್ಕರ್ ನಗರ ಸುತ್ತಮುತ್ತಲಿನ 30 ರಿಂದ 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಭಯಭೀತಿಗೊಂಡಿದ್ದರು. ಆದರೆ ಲಘು ಭೂಕಂಪನದಿಂದ ಯಾವುದೇ ಹಾನಿ ಆಗಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ.