ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪ ಕುರಿತ ತನಿಖೆ ವೇಗ ಪಡೆದುಕೊಂಡಿದೆ.
ಪ್ರಕರಣದ ಆರೋಪಿಗಳೆಂದು ಗುರ್ತಿಸಲಾಗಿರುವ ಅಕ್ರಮ್, ಅಶ್ಫಾಕ್, ನದೀಮ್ ಮತ್ತು ಮುಷ್ತಾಕ್ ಮತಗಳ್ಳತನಕ್ಕೆಂದೇ ಕಾಲ್ ಸೆಂಟರ್ ಸ್ಥಾಪಿಸಿದ್ದು, ಈ ಸೆಂಟರ್ ನಲ್ಲಿ ಐದು ಕಂಪ್ಯೂಟರ್ ಇರಿಸಿಕೊಂಡು 6,018 ಫಾರ್ಮ್ 7 ಅರ್ಜಿಗಳನ್ನು ಸ್ವೀಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈ ನಾಲ್ವರು ಆರೋಪಿಗಳು ಒಬ್ಬರು ಆನ್‌ಲೈನ್ ರಾಜಕೀಯ ಸರ್ವೇಯರ್/ಮ್ಯಾನಿಪ್ಯುಲೇಟರ್, ಒಬ್ಬ ಡೇಟಾ ಆಪರೇಟರ್ ಮತ್ತು ಇತರ ಇಬ್ಬರು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಪರಿಣತರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಆರೋಪಿಗಳು 6,018 ಅರ್ಜಿಗಳಿಗೆ ಲಾಗಿನ್ ಐಡಿಗಳನ್ನು ರಚಿಸಲು ದುರ್ಬಲ ವರ್ಗಗಳ 75 ಮಂದಿ ಮೊಬೈಲ್ ಫೋನ್ ಸಂಖ್ಯೆಗಳನ್ನು ಬಳಸಿದ್ದಾರೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿದೆ.
ಒಟಿಪಿ ಮೂಲಕ ಲಾಗಿನ್ ಐಡಿ ರಚಿಸಲಾಗಿದೆ. ಆರೋಪಿಗಳು 75 ಮೊಬೈಲ್ ಫೋನ್ ಸಂಖ್ಯೆಗಳನ್ನು ಹೇಗೆ ಪಡೆದರು? ಮೊಬೈಲ್ ಸಂಖ್ಯೆಗಳನ್ನು ಹ್ಯಾಕ್ ಮಾಡಿದ್ದರೇ? ಎಂಬುದರ ಕುರಿತು ವಿಚಾರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಈಗಾಗಲೇ ಅಕ್ರಮ್, ನದೀಮ್ ಹಾಗೂ ಮುಷ್ತಾಕ್ ನನ್ನು ವಿಚಾರಣೆ ನಡಸಿದ್ದು, ಮತ್ತೋರ್ವ ಆರೋಪಿ ಪತ್ತೆಗೆ ದುಬೈಗೆ ತೆರಳಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
2023ರಲ್ಲಿ ಪ್ರಕರಣ ಸಂಬಂಧ ಕಲಬುರಗಿ ಪೊಲೀಸರು ಅಶ್ಫಾಕ್ ನನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ಬಳಿಕ ಆರೋಪಿ ದುಬೈಗೆ ಹಾರಿದ್ದ ಎನ್ನಲಾಗಿದೆ.
ಈ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅರ್ಜಿಗಳ ಸಲ್ಲಿಕೆಗೆ ಡೇಟಾ ಆಪರೇಟರ್ ಅನ್ನು ಬಳಸಲಾಗಿದೆ. ನಂತರ ಈತ ನಾಲ್ವರ ಸಹಾಯ ಪಡೆದುಕೊಂಡಿದ್ದಾನೆ. ಈ ನಾಲ್ವರು ನಿರುದ್ಯೋಗಿಗಳಾಗಿದ್ದು, 25-30 ವರ್ಷ ವಯಸ್ಸಿನವರಾಗಿದ್ದಾರೆ. ನಾಲ್ವರು ಆರೋಪಿಗಳಿಗೆ ಪ್ರತೀ ಅರ್ಜಿಗೆ ರೂ.80 ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.