ಬೀದರ್: ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಮಹಿಳೆಗಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ಬೀದಿ ಹೆಣವಾದ ಘಟನೆ ವರದಿಯಾಗಿದೆ.
ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಪಲ್ಲಿಯಲ್ಲಿ, ಅಕ್ರಮ ಸಂಬಂಧದ ಶಂಕೆಯ ಮೇಲೆ ಮಹಾರಾಷ್ಟ್ರ ಮೂಲದ ಯುವಕನನ್ನು ಮಹಿಳೆಯ ಕುಟುಂಬಸ್ಥರು ಬಡಿದು ಕೊಲೆ ಮಾಡಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹಲ್ಲೆ ನಡೆಸಿದ ಮಹಿಳೆಯ ತಂದೆ ಮತ್ತು ಸಹೋದರನನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಗೌಣಗಾಂವ್ ಗ್ರಾಮದ ನಿವಾಸಿ ವಿಷ್ಣು (27) ಎಂಬಾತ ಕಳೆದ ಒಂದು ವರ್ಷದಿಂದ ನಾಗನಪಲ್ಲಿ ಗ್ರಾಮದ ವಿವಾಹಿತ ಮಹಿಳೆ ಪೂಜಾ ಎಂಬುವವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಅಕ್ಟೋಬರ್ 21ರಂದು ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ ಬಂದಿದ್ದ. ಈ ವೇಳೆ ಮಹಿಳೆ ಜೊತೆ ಇದ್ದಾಗಲೇ ಮನೆಗೆ ಬಂದ ಮಹಿಳೆಯ ತಂದೆ ಅಶೋಕ್ ಮತ್ತು ಸಹೋದರ ಗಜಾನನ ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಮಹಿಳೆಯ ತಂದೆ ಅಶೋಕ್ ಮತ್ತು ಸಹೋದರ ಗಜಾನನ ಸೇರಿ ವಿಷ್ಣುವಿನ ಕೈ-ಕಾಲುಗಳನ್ನು ಕಟ್ಟಿ ದೊಣ್ಣೆಗಳಿಂದ ಮನಬಂದಂತೆ ಬರ್ಬರ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆ ಸಮೀಪದ ಬೀದಿ ದೀಪ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.
ಇನ್ನು ಈ ವಿಚಾರ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಂಭೀರವಾಗಿ ಗಾಯಗೊಂಡಿದ್ದ ವಿಷ್ಣುವನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ವಿಷ್ಣು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಕೊಲೆ ಪ್ರಕರಣ ದಾಖಲು, ಪ್ರತಿ ದೂರು ದಾಖಲು
ಇನ್ನು ಮಗನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಥಳಿಸಲಾಗಿದೆ ಎಂದು ಆರೋಪಿಸಿ ಮೃತ ವಿಷ್ಣು ಅವರ ತಾಯಿ ಲಕ್ಷ್ಮೀ ಅವರು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಅಕ್ರಮ ಸಂಬಂಧದ ಶಂಕೆ ಇರುವ ಮಹಿಳೆ ಸಹ ತನ್ನ ಕುಟುಂಬಸ್ಥರ ಪರವಾಗಿ ಚಿಂತಾಕಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ದೂರುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರು ಆರೋಪಿಗಳ ಬಂಧನ
ಸದ್ಯ ಲಭ್ಯವಿರುವ ಮಾಹಿತಿ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಆರೋಪದ ಮೇಲೆ ಮಹಿಳೆಯ ತಂದೆ ಅಶೋಕ್ ಮತ್ತು ಆಕೆಯ ಸಹೋದರ ಗಜಾನನ ಎಂಬ ಇಬ್ಬರನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಯುವಕನ ಕೊಲೆಗೆ ನಿಖರ ಕಾರಣಗಳೇನು? ಹಲ್ಲೆಗೂ ಮುನ್ನ ಸ್ನೇಹಿತರು ಎಲ್ಲಿಗೆ ಹೋದರು? ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ. ನಾಗನಪಲ್ಲಿ ಗ್ರಾಮದಲ್ಲಿ ಬಿಗಿಯಾದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದಾರೆ.
ವಿಡಿಯೋ ವೈರಲ್
ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಪ್ರಸ್ತುತ ವೈರಲ್ ಆಗಿದೆ.
ದೂರಿನಲ್ಲೇನಿದೆ?
ವಿಷ್ಣುವಿನ ತಾಯಿ ಲಕ್ಷ್ಮಿ ತಮ್ಮ ದೂರಿನಲ್ಲಿ, 'ತನ್ನ ಮಗ ಪೂಜಾಳೊಂದಿಗೆ ಒಂದು ವರ್ಷದ ಸಂಬಂಧ ಹೊಂದಿದ್ದಳು ಎಂದು ಹೇಳಿಕೊಂಡಿದ್ದಾರೆ.
ಪೂಜಾ ವಿವಾಹಿತ ಮಹಿಳೆಯಾಗಿದ್ದು, ಆಕೆ ತನ್ನ ಗಂಡನನ್ನು ಬಿಟ್ಟು ವಿಷ್ಣುವಿನ ಜೊತೆ ವಾಸಿಸುತ್ತಿದ್ದಳು. ಸುಮಾರು ಮೂರು ತಿಂಗಳ ಹಿಂದೆ ಪೂಜಾ ನಾಗನಪಲ್ಲಿಯಲ್ಲಿರುವ ತನ್ನ ಪೋಷಕರ ಮನೆಗೆ ಮರಳಿದಳು. ಮಂಗಳವಾರ, ವಿಷ್ಣು ಇಬ್ಬರು ಪರಿಚಯಸ್ಥರೊಂದಿಗೆ ಅಲ್ಲಿಗೆ ಹೋಗಿದ್ದ. ಹನುಮಾನ್ ದೇವಸ್ಥಾನದಲ್ಲಿ, ಪೂಜಾಳ ತಂದೆ ಅಶೋಕ್ ಮತ್ತು ಸಹೋದರ ಗಜಾನನ್ ಈ ಸಂಬಂಧದ ಬಗ್ಗೆ ಆತನನ್ನು ಹೊರಗೆ ಎಳೆದೊಯ್ದು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಚಿಂತಾಕಿ ಪೊಲೀಸರು ಬಿಎನ್ಎಸ್ ಸೆಕ್ಷನ್ 109, 118(1), 352, ಮತ್ತು 127(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ (ಅಪರಾಧ ಸಂಖ್ಯೆ 79/2025). ವಿಷ್ಣುವಿನ ಸಾವಿನ ನಂತರ, ಕೊಲೆ ಆರೋಪಗಳನ್ನು ಸೇರಿಸಲಾಯಿತು ಮತ್ತು ಅಶೋಕ್ ಮತ್ತು ಗಜಾನನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.