ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ವರದಿ ಕೊಡುವುದಾಗಿ ಎಸ್‌ಐಟಿ ಹೇಳಿತ್ತು. 31ರೊಳಗೆ ಕೊಡಬಹುದು ಅಥವಾ ಒಂದೆರಡು ದಿನ ವಿಳಂಬವಾಗಬಹುದು. ಪತ್ತೆಯಾಗಿರುವ ಮೂಳೆಗಳ ಎಫ್‌ಎಸ್‌ಎಲ್ ವರದಿ, ಕೆಮಿಕಲ್ ರಿಪೋರ್ಟ್ಸ್ ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು. ಮತ್ತೊಂದೆಡೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸೋಮವಾರ ಬೆಳಿಗ್ಗೆ 10:30ಕ್ಕೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಹಾಗೂ ವಿಠಲಗೌಡಗೆ ನೋಟಿಸ್ ನೀಡಲಾಗಿತ್ತು. ಆದರೆ ಇಂದು ಮಧ್ಯಾಹ್ನವಾದರೂ ಯಾರೂ ವಿಚಾರಣೆಗೆ ಹಾಜರಾಗಿರಲಿಲ್ಲ. ವಿಚಾರಣೆಗೆ ಗೈರಾಗಿದ್ದಲ್ಲಿ ಬಂಧಿಸುವ ಎಚ್ಚರಿಕೆ ಬಗ್ಗೆಯೂ ನೋಟಿಸ್ ನಲ್ಲಿ ತಿಳಿಸಲಾಗಿತ್ತು.
ನವೆಂಬರ್ ಕ್ರಾಂತಿ ಮತ್ತು ಕರ್ನಾಟಕದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪ್ರಮುಖ ರಾಜಕೀಯ ಬದಲಾವಣೆಗಳ ಕುರಿತಾದ ಊಹಾಪೋಹಗಳನ್ನು ಸಚಿವ ಸತೀಶ್ ಜಾರಕಿಹೊಳಿ ತಳ್ಳಿಹಾಕಿದ್ದಾರೆ. ಪಕ್ಷದ ಹೈಕಮಾಂಡ್ ಅಂತಹ ಯಾವುದೇ ಕ್ರಾಂತಿ ನಡೆಯಲು ಬಿಡುವುದಿಲ್ಲ. ನಾನು ಅದನ್ನು ಹಲವು ಬಾರಿ ಹೇಳಿದ್ದೇನೆ ಎಂದರು. ಇನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ನಿರ್ಧರಿಸಲಾಗುತ್ತದೆ. ನನಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಜಾರಕಿಹೊಳಿ ಸಚಿವ ಸಂಪುಟ ಪುನರ್ರಚನೆ ಮತ್ತು ನಾಯಕತ್ವ ಬದಲಾವಣೆಯೊಂದಿಗೆ ಅಧಿಕಾರ ಹಂಚಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಮಧ್ಯೆ, ಭಾನುವಾರ ಸಂಜೆ ದೆಹಲಿಗೆ ತೆರಳಿದ್ದ ಡಿಕೆಶಿ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಕೇಳಿದ್ದರು. ಆದರೆ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗದೆ ಡಿಸಿಎಂ ಡಿಕೆ ಶಿವಕುಮಾರ್ ವಾಪಸ್ ಆಗಿದ್ದಾರೆ.
ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಹಾಗೂ ಹೋಟೆಲ್ ಉದ್ಯಮಿ ಆನಂದ ಉಮೇಶ್ ಹೆಗಡೆ ಹೂವಿನಹಡಗಲಿಯ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಭವಾನಿ ನಗರ ನಿವಾಸಿಯಾದ ಆನಂದ್ ನಿನ್ನೆ ಬೆಳಗ್ಗೆ ಹೂವಿನಹಡಗಲಿ ಪಟ್ಟಣಕ್ಕೆ ಬಂದು ದಾಕ್ಷಾಯಣಿ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಅದೇ ರೂಂನಲ್ಲಿ ನಿನ್ನೆ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಆನಂದ್ ಹೂವಿನಹಡಗಲಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಯ ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಇನ್ಸ್ಪೆಕ್ಟರ್ ಹಾಗೂ ಎಎಸ್ಐ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಇಬ್ಬರನ್ನೂ ಅಮಾನತು ಮಾಡಲಾಗಿದ್ದು ತನಿಖೆ ನಡೆಯುತ್ತಿದೆ ಎಂದರು. 36 ವರ್ಷದ ಮಹಿಳೆಯೊಬ್ಬರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಡಿಜಿ ಮತ್ತು ಐಜಿಪಿ ಕಚೇರಿಗೂ ದೂರು ನೀಡಿದ್ದರು. ಸುನೀಲ್ ರಿಜಿಸ್ಟರ್ ಮದುವೆಯಾಗುವುದಾಗಿ ಭರವಸೆ ನೀಡಿ 1 ವರ್ಷದಲ್ಲಿ 3 ಬಾರಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ನಮ್ಮ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.
ಗಾಂಧಿನಗರ ಕ್ಷೇತ್ರದಲ್ಲಿ 11,200 ನಕಲಿ ಮತದಾರರಿದ್ದಾರೆ. ಮತಗಳ್ಳತನ ನಡೆಯದಿದ್ದರೆ ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಸಂಸದರು ಆಯ್ಕೆ ಆಗುತ್ತಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸನ್ ರೈಸ್ ಸರ್ಕಲ್‌ನಲ್ಲಿ ಮತಗಳ್ಳತನ ವಿರುದ್ಧ ನಡೆಯುತ್ತಿರುವ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಕಲಿ ಮತದಾರರ ಪಟ್ಟಿಯನ್ನು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ, ಇನ್ನು ಯಾವುದೇ ಕ್ರಮ ಆಗಿಲ್ಲ. ನಕಲಿ ಮತಗಳ ಅಳಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ಇನ್ನೂ ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರನ್ನು ಸೃಷ್ಟಿಸಿ ಅವರಿಂದ ಮತ ಪಡೆದುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೆ ಜನರು ಪ್ರಶ್ನೆ ಮಾಡಬೇಕಾಗಿದೆ ಎಂದರು.