ಬೆಂಗಳೂರು: ನಟ ಧ್ರುವ ಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಧ್ರುವ ಸರ್ಜಾ, ಅವರ ಮ್ಯಾನೇಜರ್ ಹಾಗೂ ಫ್ಯಾನ್ಸ್ ವಿರುದ್ಧ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕೆಡಿ' ಸಿನಿಮಾದ ಪ್ರಮೋಷನ್ ಶುರು ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿಯೇ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಇದು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಹಾಗಂತ ಕೇವಲ ಧ್ರುವ ಸರ್ಜಾ ಅಷ್ಟೇ ಅಲ್ಲ. ಅವರ ಮ್ಯಾನೇಜರ್, ಡ್ರೈವರ್ ಹಾಗೂ ಅಭಿಮಾನಿಗಳ ವಿರುದ್ಧವೂ ದೂರು ದಾಖಲಾಗಿದೆ. ಆಕ್ಷನ್ ಪ್ರಿನ್ಸ್ ಪಕ್ಕದ ಮನೆಯವರಿಂದಲೇ ಈ ದೂರು ದಾಖಲು ಮಾಡಲಾಗಿದೆ. ಇದರಲ್ಲಿ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಬನಶಂಕರಿಯಲ್ಲಿರುವ ಧ್ರುವ ಸರ್ಜಾ ಅವರ ಪಕ್ಕದ ಮನೆಯವರಾದ ಮನೋಜ್ ಎಂಬುವವರು ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ಸಿನಿಮಾ ಹೀರೋ ಆಗಿದ್ದರಿಂದ ಪ್ರತಿ ನಿತ್ಯ ಅಭಿಮಾನಿಗಳು ಅವರನ್ನು ನೋಡುವುದಕ್ಕೆ ಬರುತ್ತಾರೆ. ಕೆಲವರು ನಡೆದುಕೊಂಡು ಬಂದರೆ, ಮತ್ತೆ ಕೆಲವರು ಬೈಕ್, ಸ್ಕೂಟರ್‌ಗಳಲ್ಲಿ ಬರುತ್ತಲೇ ಇರುತ್ತಾರೆ. ಇದರಿಂದ ತಮಗೆ ತೊಂದರೆಯಾಗಿದೆ.
ಮನೆಯ ಮುಂದೆ ಧ್ರುವ ಸರ್ಜಾ ಅಭಿಮಾನಿಗಳು ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಮನೆ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಗಳಿಗೆ ಉಗಿಯುತ್ತಾರೆ. ಇದರಿಂದ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗುತ್ತದೆ ಎಂದು ಧ್ರುವ ಸರ್ಜಾ, ಅವರ ಮ್ಯಾನೇಜರ್ ಹಾಗೂ ಅಭಿಮಾನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಮನವಿ ಮಾಡಿದ್ದಾರೆ.