ಬೆಂಗಳೂರು: ರಾಜ್ಯಾದ್ಯಂತ 74 ಆದರ್ಶ ವಿದ್ಯಾಲಯಗಳ 316 ಪದವಿ ಪೂರ್ವ ಅತಿಥಿ ಉಪನ್ಯಾಸಕರ ವೇತನವನ್ನು ಪಾವತಿಸಲು ಹಣ ಬಿಡುಗಡೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಿ ಆದೇಶ ಹೊರಡಿಸಿದೆ.
ಜೂನ್ ನಿಂದ ಅಕ್ಟೋಬರ್ ವರೆಗೆ ಐದು ತಿಂಗಳ ವೇತನವನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಕ್ಟೋಬರ್ 22 ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕೊನೆಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಆದೇಶ ಹೊರಡಿಸಿದೆ.
ಅತಿಥಿ ಉಪನ್ಯಾಸಕರ ವೇತನ ಕೇವಲ 14 ಸಾವಿರ!
ಈ ಬಗ್ಗೆ ಮಾತನಾಡಿರುವ ಅತಿಥಿ ಉಪನ್ಯಾಸಕರಾದ ರಾಜೇಶ್ ಭಟ್, ಕೊನೆಗೂ, ಐದು ತಿಂಗಳ ಕಾಲ ತಡೆಹಿಡಿಯಲಾದ ನಮ್ಮ ವೇತನವನ್ನು ಸರ್ಕಾರ ಪಾವತಿಸುತ್ತದೆ. ಅತಿಥಿ ಉಪನ್ಯಾಸಕರಿಗೆ ಪ್ರತಿ ತಿಂಗಳು ಕೇವಲ 14,000 ರೂಪಾಯಿ ವೇತನ ಮಾತ್ರ ನೀಡಲಾಗುತ್ತದೆ. ಇದು ನಮ್ಮ ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಗೃಹಬಳಕೆಯ ಗ್ಯಾಸ್, ಮಕ್ಕಳ ಶಾಲಾ ಶುಲ್ಕ ಮತ್ತು ವೈದ್ಯಕೀಯ ವೆಚ್ಚಗಳಂತಹ ವೆಚ್ಚಗಳನ್ನು ಭರಿಸಲು ಸಾಕಾಗುವುದಿಲ್ಲ.
ಇದರ ಜೊತೆಗೆ, ಉಪನ್ಯಾಸಕರು ಶೈಕ್ಷಣಿಕ ವರ್ಷದಲ್ಲಿ ಹತ್ತು ತಿಂಗಳು ಕೆಲಸ ಮಾಡಿದರೂ, ಮಾರ್ಚ್ ತಿಂಗಳಲ್ಲಿ ಕಾಲೇಜುಗಳು ಮುಚ್ಚುತ್ತವೆ ಎಂದು ಇಲಾಖೆ ಹೇಳುವುದರಿಂದ ನಮಗೆ ಒಂಬತ್ತು ತಿಂಗಳು ಮಾತ್ರ ವೇತನ ನೀಡುತ್ತಾರೆ. ಪ್ರತಿ ವರ್ಷ ನಡೆಯುವ ಪರೀಕ್ಷಾ ಕರ್ತವ್ಯಕ್ಕೆ ನಮಗೆ ಯಾವುದೇ ಸಂಭಾವನೆ ನೀಡಲಾಗುವುದಿಲ್ಲ ಎಂದು ಅಳಲು ತೋಡಿಕೊಂಡರು.
ಸರ್ಕಾರದಿಂದ ನೇಮಕಗೊಂಡ ಖಾಯಂ ಉಪನ್ಯಾಸಕರಿಗೆ ಹೋಲಿಸಿದರೆ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಿರುವುದರಿಂದ ಅವರ ಹಿತದೃಷ್ಟಿಯಿಂದ ಈ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ರಾಜೇಶ್ ಒತ್ತಾಯಿಸಿದರು.
ಕಳೆದ ಜೂನ್ ತಿಂಗಳಿನಿಂದ ಮುಂದಿನ ವರ್ಷ ಫೆಬ್ರವರಿ 2026 ರವರೆಗಿನ ವೇತನವನ್ನು ಪಾವತಿಸಲು 3,97,32,000 ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಆದೇಶದಲ್ಲಿ ಹೇಳಲಾಗಿದೆ.