ಬೆಂಗಳೂರು: ಕಾಂಗ್ರೆಸ್ ಸರ್ಕಾರದ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ನಡುವಲ್ಲೇ 100 ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಬೆಂಬಲ ನೀಡಿದ ಸಚಿವರು, ಸಂಸದರು ಹಾಗೂ ಶಾಸಕರ ಕುರಿತು ವರದಿ ಸಲ್ಲಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, 100 ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಬೆಂಬಲಿಸಿದ ಹಾಗೂ ಬೆಂಬಲಿಸಿದ ಸಚಿವರು, ಶಾಸಕರು ಹಾಗೂ ಸಂಸದರ ಕುರಿತು ವರದಿ ಸಲ್ಲಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಸೂಚನೆ ಬೆನ್ನಲ್ಲೇ ವರದಿ ಸಿದ್ಧಪಡಿಸುತ್ತಿದ್ದೇವೆ. ಶೀಘ್ರದಲ್ಲೇ ವರದಿಯನ್ನು ಸಲ್ಲಿಸುತ್ತೇವೆಂದು ಹೇಳಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ತಿಂಗಳು ಕಾಂಗ್ರೆಸ್ ಭವನಗಳಿಗ ಶಂಕುಸ್ಥಾಪನೆ ನೆರವೇರಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ. ಸಮಯ ಕೇಳಲಾಗಿದೆ. ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ತಿಳಿಸಿದರು.
ಎಂಎಲ್‌ಸಿ ಚುನಾವಣೆಗೆ ಸಿದ್ಧತೆಗಳ ಕುರಿತ ಪ್ರಶ್ನೆಗೆ ಉತ್ತರಿಸಿ, ಪ್ರತಿ ಸ್ಥಾನಕ್ಕೆ 5-6 ಆಕಾಂಕ್ಷಿಗಳಿದ್ದು, ಸುಮಾರು 8 ರಿಂದ 10 ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಈ ಬಗ್ಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದರು.
ಇದೇ ವೇಳೆ ಬಿಹಾರ ಚುನಾವಣೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಕ್ಷಕ್ಕೆ 300 ಕೋಟಿ ರೂ. ನೀಡಿದ್ದಾರೆ ಎಂಬ ಬಿಜೆಪಿ ನಾಯಕ ಬಿ. ಶ್ರೀರಾಮುಲು ಅವರ ಆರೋಪವನ್ನು ತಳ್ಳಿಹಾಕಿದರು.