ಬೆಂಗಳೂರು: ಆನ್‍ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಮಹಿಳೆಯೊಬ್ಬರು ತಾನು ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದು, ಪ್ರಕರಣ ಸಂಬಂಧ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಮಹಿಳೆಯನ್ನು ಮಂಗಳಾ (32) ಎಂದು ಗುರ್ತಿಸಲಾಗಿದೆ. ಸದ್ಯ ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆ.ಜಿ. ಬೆಳ್ಳಿ ವಶಕ್ಕೆ ಪಡೆಯಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಬೆಂಗಳೂರಿನ ಜೆ.ಪಿ.ನಗರದ 2ನೇ ಹಂತದಲ್ಲಿ ವಾಸವಿದ್ದ ಆಶಾ ಜಾಧವ್ ಎಂಬವರು ತಮ್ಮ ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಮಂಗಳಾ ಎಂಬಾಕೆಯನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು.
58 ವರ್ಷ ವಯಸ್ಸಿನ ಆಶಾ ಜಾಧವ್ ಅವರ ಪತಿ ಮೃತಪಟ್ಟಿದ್ದು, ದಂಪತಿಗೆ ಮಕ್ಕಳಿಲ್ಲ. ಜೆ.ಪಿ. ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಆಶಾ ಜಾಧವ್, ಮಂಗಳಾ ಅವರನ್ನೇ ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಒಂದೂವರೆ ಕೋಟಿ ರೂ. ಮೌಲ್ಯದ ಮನೆಯನ್ನು ಮಂಗಳಾ ಹೆಸರಿಗೆ ಬರೆದಿದ್ದರು.
ಕೆಲ ವರ್ಷಗಳ ಹಿಂದೆ ಆಶಾ ಜಾಧವ್ ಅವರ ತಾಯಿ ಮೃತಪಟ್ಟ ಬಳಿಕ ಇರುವ ಆಸ್ತಿಯನ್ನು ಏನು ಮಾಡಬೇಕೆಂದು ಮಂಗಳಾ ಹೆಸರಿಗೇ ಬರೆದಿದ್ದರು. ಆದರೆ, ಆನ್‍ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಮಂಗಳಾ, ತನ್ನ ಪ್ರಿಯಕರನ ಜೊತೆ ಪಾರ್ಟಿ, ಪಬ್ ಎಂದು ಸುತ್ತಾಡುತ್ತಾ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಳು. ಇಷ್ಟಾದರೂ ಸಹ ಮಂಗಳಾ ಮಾಡಿಕೊಂಡಿದ್ದ 40 ಲಕ್ಷ ರೂ. ಸಾಲವನ್ನು ಆಶಾ ಜಾಧವ್ ಅವರು ತೀರಿಸಿದ್ದರು.
ಇತ್ತ, ಆನ್‍ಲೈನ್ ಬೆಟ್ಟಿಂಗ್ ಸಹವಾಸ ಬಿಡದ ಮಂಗಳಾ ತನ್ನ ಹೆಸರಿಗೆ ಬರೆದಿದ್ದ ಮನೆಯನ್ನೂ ಮಾರಾಟ ಮಾಡಿ ಹಣ ಕಳೆದುಕೊಂಡಿದ್ದಳು. ಆದರೂ ಸಹ ಆಕೆಯನ್ನು ಜೊತೆಯಲ್ಲಿಟ್ಟುಕೊಂಡು ಆಶಾ ಜಾಧವ್ ಅವರೇ ಸಾಕುತ್ತಿದ್ದರು. ಇಷ್ಟಾದರೂ, ಆನ್‍ಲೈನ್ ಬೆಟ್ಟಿಂಗ್ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಮಂಗಳಾ ಹಾಗೂ ಆಶಾ ನಡುವೆ ಜಗಳವಾಗಿದೆ. ನಂತರ ಮಂಗಳಾ ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು.
ಮನೆಯಿಂದ ಹೊರ ಹೋಗುವ ಮುನ್ನ 450 ಗ್ರಾಂ ಚಿನ್ನದ ಆಭರಣಗಳು, 3.8 ಕೆಜಿ ಬೆಳ್ಳಿ ವಸ್ತುಗಳು ಮತ್ತು 1 ಲಕ್ಷ ರೂ. ನಗದನ್ನು ಕದ್ದಿದ್ದಾಳೆ. ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದನ್ನು ಕಂಡು ಆಶಾ ಅವರು, ಅಕ್ಟೋಬರ್ ಎರಡನೇ ವಾರದಲ್ಲಿ ಜೆಪಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.