ಬೆಂಗಳೂರು: ಐಟಿ ಸಿಟಿ, ಉದ್ಯಾನನಗರಿ ಎಂದು ಹೆಸರು ಗಳಿಸಿರುವ ಬೆಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮೊದಲಿನಿಂದಲೂ ಇದೆ. ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದು, ಖಾಲಿ ಸೈಟ್ ಗಳಲ್ಲಿ ಅಕ್ಕಪಕ್ಕದ ಮನೆಯವರು ತಂದು ಕಸ ಸುರಿಯುವುದು ಇತ್ಯಾದಿ ಸಮಸ್ಯೆ ಕಂಡುಬರುತ್ತಿದೆ.
ಹೀಗೆ ರಸ್ತೆ ಬದಿಯಲ್ಲಿ ಖಾಲಿ ಸೈಟ್ ಗಳಲ್ಲಿ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮಾರ್ಷಲ್ಗಳು ನಿನ್ನೆ ಗುರುವಾರ ಭರ್ಜರಿ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ. ಅದು ಕಸ ಸುರಿಯುವ ಹಬ್ಬ.
ಸಾವಿರದಿಂದ 10 ಸಾವಿರದವರೆಗೆ ದಂಡ
ನಿನ್ನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನ ಗಾಂಧಿನಗರ ವಾರ್ಡ್ ನಂಬರ್ 94 ರಲ್ಲಿ ವಾಸವಾಗಿರುವ ಮನೆಯವರು ರಸ್ತೆ ಬದಿ ಕಸ ಎಸೆದು ಬಂದಿದ್ದರು. ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಪಾಲಿಕೆ ಮಾರ್ಷೆಲ್‌ಗಳು, ಕಸವನ್ನು ಅವರ ಮನೆ ಮುಂದೆಯೇ ಸುರಿದಿದ್ದಾರೆ. ಹೀಗೆ ಇದೇ ಏರಿಯಾದಲ್ಲಿ ಹತ್ತಾರು ಮನೆಗಳ ಮುಂದೆ ಕಸ ಸುರಿದು, ಜತೆಗೆ ತಲಾ 1 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಮಲ್ಲೇಶ್ವರ, ಹೊಸಕೆರೆಹಳ್ಳಿ, ಬನಶಂಕರಿ, ಮಹದೇವಪುರ ಸೇರಿದಂತೆ ಹಲವೆಡೆ ಕಸ ಎಸೆಯುವವರನ್ನು ಮಾರ್ಷಲ್‌ಗಳ ಮೂಲಕ ಪತ್ತೆಹಚ್ಚಿದ್ದ ಜಿಬಿಎ, ಎಲ್ಲೆಂದರಲ್ಲಿ ಕಸ ಎಸೆದ 218 ಜನರ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಿದೆ. ಅಲ್ಲದೇ ಕಸ ಎಸೆದವರ ಬಳಿ ತಲಾ ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.
ಆರಂಭದಲ್ಲಿ ಒಂದು ಸಾವಿರ ದಂಡ ವಿಧಿಸುತ್ತಿರುವ ಜಿಬಿಎ, ಮತ್ತೆ ಕಸ ಹಾಕಿದರೆ, ಮತ್ತೊಂದು ಶಾಕ್ ಕೊಡಲು ಮುಂದಾಗಿದೆ. 10 ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.