ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನೀತಿಗಳು ಕರ್ನಾಟಕವನ್ನು ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳವನ್ನಾಗಿ ಮಾಡಿವೆ ಎಂದು ಆರೋಪಿಸಿ ವಿರೋಧ ಪಕ್ಷವಾದ ಬಿಜೆಪಿ ಶುಕ್ರವಾರ 'ಕಿಲ್ಲರ್ ಕಾಂಗ್ರೆಸ್' ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಮಹಿಳಾ ಸದಸ್ಯರೊಂದಿಗೆ ಇಲ್ಲಿ ಅಭಿಯಾನವನ್ನು ಪ್ರಾರಂಭಿಸಿದರು.
ಪೋಸ್ಟರ್‌ನಲ್ಲಿ ಕಾಂಗ್ರೆಸ್ ಚಿಹ್ನೆಯ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ಛಾಯಾಚಿತ್ರಗಳಿದ್ದು, ಹಸ್ತವು ರಕ್ತಸಿಕ್ತವಾಗಿರುವಂತೆ ತೋರಿಸಲಾಗಿದೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, 'ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಮಹಿಳೆಯರ ಮೇಲಿನ 1,800ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ ಎಂದರು.
ಅನೇಕ ಶಾಲಾ ಬಾಲಕಿಯರು ಕಣ್ಮರೆಯಾಗುತ್ತಿದ್ದಾರೆ ಮತ್ತು ಮನೆಗೆ ಹಿಂತಿರುಗುತ್ತಿಲ್ಲ. ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಒಬ್ಬ ವಿದ್ಯಾರ್ಥಿನಿಯನ್ನು ಕೊಲ್ಲಲಾಯಿತು ಮತ್ತು ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗ ಮಹಿಳೆಯನ್ನು ವಿವಸ್ತ್ರಗೊಳಿಸಲಾಯಿತು. ಬೆಂಗಳೂರಿನ ಅಧ್ಯಾಪಕರೊಬ್ಬರು ಮೂಡಬಿದ್ರಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಚಿವರು ಆರೋಪಿಸಿದರು.
'ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕಿಶೋರ್ ರಹತ್ಕರ್ ಅವರಿಗೆ ಸದ್ಯದ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದೇವೆ ಮತ್ತು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದೇವೆ. ರಹತ್ಕರ್ ಅವರು ಎರಡು ವಾರಗಳ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ, ನಾವು ಅವರಿಗೆ ಮಹಿಳಾ ಸುರಕ್ಷತೆಯ ಬಗ್ಗೆ ತಿಳಿಸಿದ್ದೆವು' ಎಂದು ಕರಂದ್ಲಾಜೆ ಹೇಳಿದರು.