ಬೆಂಗಳೂರು: ಈ ವರ್ಷ ಭಾರೀ ಮಳೆಗೆ ಬೆಂಗಳೂರಿನ ರಸ್ತೆ ತೀರಾ ಹದಗೆಟ್ಟು ಬಹುತೇಕ ಕಡೆ ಹೊಂಡ-ಗುಂಡಿ ಉಂಟಾಗಿದೆ. ವಿಪಕ್ಷಗಳು, ಸಾರ್ವಜನಿಕರ ಟೀಕೆಗಳ ನಂತರ ರಸ್ತೆಗುಂಡಿ ಮುಚ್ಚುವ ಕೆಲಸಕ್ಕೆ ಸರ್ಕಾರ ಮುಂದಾಗಿದ್ದು, ಅನೇಕ ಕಡೆ ಗುಂಡಿ ಮುಚ್ಚುವ ಕೆಲಸವಾಗುತ್ತಿದೆ.
ಈ ಹಿಂದೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 31ರೊಳಗೆ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಲಾಗಿತ್ತು.
ಆದರೆ ಕಳೆದ ವಾರ ಮತ್ತು ಈ ವಾರದ ಆರಂಭದಲ್ಲಿ ಮೊಂತಾ ಚಂಡಮಾರುತದಿಂದ ರಸ್ತೆಗುಂಡಿ ಮುಚ್ಚುವ ಕೆಲಸ ವಿಳಂಬವಾಗಿದೆ. ಅನೇಕ ಕಡೆ ಕೆಲಸ ಕುಂಠಿತವಾಗಿದೆ. ಗ್ರೇಟರ್ ಬೆಂಗಳೂರಿನ ಕಾಮಗಾರಿ ಕೆಲವು ಕಡೆ ನೋಡಿದರೆ ಒಂದು ತಿಂಗಳಲ್ಲಿ ಕಿತ್ತು ಬರುವಂತೆ ಇದೆ.
ನೀವು ಕೊಟ್ಟ ಡೆಡ್ ಲೈನ್ ಇಂದು ಮುಗಿಯುತ್ತಲ್ಲಾ, ರಸ್ತೆಗುಂಡಿ ಕೆಲಸದ ಬಗ್ಗೆ ಏನು ಹೇಳುತ್ತೀರಿ ಎಂದು ಮಾಧ್ಯಮದವರು ಇಂದು ವಿಧಾನಸೌಧ ಬಳಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ, ಅದರ ಬಗ್ಗೆ ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ ಎಂದರು.
ಬೆಂಗಳೂರಿಗೆ ಮೃತ್ಯುಕೂಪಗಳಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ನೀಡಿದ್ದ ಡೆಡ್‌ಲೈನ್ ಯಾವ ತಾರೀಖಿಗೆ ಮುಗಿಯುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ನೆನಪಿದೆಯೇ. ಇವತ್ತು ಯಾವ ತಾರೀಖು ಎಂಬುದು ಗೊತ್ತಿದೆಯೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ರಸ್ತೆಗುಂಡಿ ಮುಚ್ಚುವ ಗಡುವು ಇಂದಿಗೆ ಮುಗಿದಿದ್ದರೂ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ಇದೊಂದು ನಾಲಾಯಕ್ ಸರ್ಕಾರ. ಜನ ಈ ಸರ್ಕಾರಕ್ಕೆ ಛೀ.. ಥೂ.. ಎಂದು ಉಗಿಯುತ್ತಿದ್ದಾರೆ. ಶಾಪ ಹಾಕುತ್ತಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಕರ್ನಾಟಕವನ್ನು ಉಳಿಸಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.