ಬಿಜೆಪಿ ನಾಯಕರೊಬ್ಬರ ಪುತ್ರ ಮತ್ತು ಆತನ ಸ್ನೇಹಿತರು ವಿಜಯಪುರ-ಕಲಬುರಗಿ ಹೆದ್ದಾರಿಯಲ್ಲಿ ಟೋಲ್ ಬೂತ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ನಿಂದಿಸುತ್ತಿರುವ ಘಟನೆ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿ ವೈರಲ್ ಆಗಿದೆ.
ಕನ್ನೋಳಿ ಟೋಲ್ ಪ್ಲಾಜಾದಲ್ಲಿ ನಿನ್ನೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ಈ ವೀಡಿಯೊದಲ್ಲಿ, ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಅವರ ಪುತ್ರ ಸಮರ್ಥಗೌಡ ಮತ್ತು ಆತನ ಸಹಚರರು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕೂಗಾಡುತ್ತಿರುವುದನ್ನು ಕಾಣಬಹುದು.
ಪೊಲೀಸರ ಪ್ರಕಾರ, ಈ ಗುಂಪು ವಿಜಯಪುರದಿಂದ ಸಿಂದಗಿಗೆ ಪ್ರಯಾಣಿಸುತ್ತಿತ್ತು. ಬೂತ್‌ನಲ್ಲಿ ನಿಲ್ಲಿಸಿ ಟೋಲ್ ಪಾವತಿಸಲು ಕೇಳಿದಾಗ, ಸಮರ್ಥಗೌಡ "ನಾನು ಯಾರು ಎಂದು ನಿಮಗೆ ತಿಳಿದಿದೆಯೇ, ನಾನು ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ಮಗ ಎಂದು ಸಿಬ್ಬಂದಿಗೆ ಸವಾಲು ಹಾಕಿದ್ದಾರೆ.
ಸಿಬ್ಬಂದಿ "ಯಾವ ವಿಜುಗೌಡ?" ಎಂದು ಕೇಳಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು ಎಂದು ವರದಿಯಾಗಿದೆ. ಆ ಸಮಯದಲ್ಲಿ, ಸಮರ್ಥಗೌಡ ಮತ್ತು ಆತನ ಸ್ನೇಹಿತರು ಕೆಲಸಗಾರನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ನಿಂದಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹಿಂಸಾಚಾರವನ್ನು ತಡೆಯಲು ಇತರ ಟೋಲ್ ಬೂತ್ ಸಿಬ್ಬಂದಿ ಮಧ್ಯ ಪ್ರವೇಶಿಸಿದ್ದಾರೆ.
ಘಟನೆಯಲ್ಲಿ ಟೋಲ್ ಬೂತ್ ಸಿಬ್ಬಂದಿ ಸಂಗಪ್ಪ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಟೋಲ್ ಸಿಬ್ಬಂದಿ ಇಲ್ಲಿಯವರೆಗೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುತ್ರನ ವರ್ತನೆಗೆ ತಂದೆ ಸಮರ್ಥನೆ: ಟೋಲ್ ಪ್ಲಾಜಾದಲ್ಲಿ ತಮ್ಮ ಮಗನ ಕೃತ್ಯವನ್ನು ಬಿಜೆಪಿ ನಾಯಕ ವಿಜಯಗೌಡ ಪಾಟೀಲ್ ಸಮರ್ಥಿಸಿಕೊಳ್ಳುತ್ತಿದ್ದಾರೆ , ತಪ್ಪು ಟೋಲ್ ಸಿಬ್ಬಂದಿಯದ್ದೇ. ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ, ಆಗ ನನ್ನ ಮಗನಿಗೆ ಸಿಟ್ಟು ಬಂದು ಆ ರೀತಿ ಮಾಡಿದ್ದಾನೆ ಎಂದು ಹೇಳಿದ್ದಾರೆ. ಹೆಸರನ್ನು ಉಲ್ಲೇಖಿಸಿ ಶುಲ್ಕ ಪಾವತಿಸಲು ಕೇಳಿದಾಗ, ಅವರ ಮಗ ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.