ಪ್ರಲ್ಹಾದ ಜೋಶಿ  
ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣ: ಮೋದಿ ಸರ್ಕಾರ ನಿಮ್ಮೊಂದಿಗಿದೆ; ಧರ್ಮಾಧಿಕಾರಿ ವಿರೇಂದ್ರ ಹೆಗ್ಗೆಡೆ ಬೆನ್ನಿಗೆ ನಿಂತ ಕೇಂದ್ರ ಸಚಿವ!

ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಪ್ರಭಾವ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಕ್ಷೇತ್ರದ ಮೇಲೆ ಇರುವ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆ ಕಡಿಮೆ ಮಾಡುವ ಸಂಚು ಇದಾಗಿದೆ

ಧರ್ಮಸ್ಥಳ: ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಬಹುಸಂಖ್ಯಾತರ ವಿರುದ್ಧ ಸದಾ ಕಾಲಕ್ಕೂ ಷಡ್ಯಂತ್ರ ನಡೆಸುತ್ತಲೇ ಬಂದಿದೆ. ಧರ್ಮಸ್ಥಳ ಪ್ರಕರಣ ಸಹ ಇದರದ್ದೊಂದು ಭಾಗವೇ ಆಗಿದ್ದು, ಮೋದಿ ಸರ್ಕಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಸೋಮವಾರ ಹೇಳಿದರು.

ʼಧರ್ಮಸ್ಥಳ ಚಲೋʼ ಹಾಗೂ ಸಮಾಜ ಜಾಗೃತಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಕೇವಲ ಒಂದೇ ಒಂದು ವರ್ಗದವರು ಬರುವುದಿಲ್ಲ. ಎಲ್ಲಾ ವರ್ಗದವರೂ ಬರುತ್ತಾರೆ. ಅದರಲ್ಲೂ ಅತ್ಯಂತ ಹಿಂದುಳಿದ ವರ್ಗದವರು ಬಂದು ಅಣ್ಣಪ್ಪ ಸ್ವಾಮಿಗೆ ನಮಸ್ಕಾರ ಹಾಕಿ, ಮಂಜುನಾಥೇಶ್ವರನಿಗೆ ಮುಡಿ ಕೊಟ್ಟು ಹೋಗುವ ಸಂಪ್ರದಾಯ ತಲತಲಾಂತರದಿಂದ ಬೆಳೆದು ಬಂದಿದೆ. ಆದರೆ, ಇಂದು ಬುರುಡೆ ಪ್ರಕರಣದ ನೆಪದಲ್ಲಿ ಹಿಂದೂ ಸಮಾಜವನ್ನೇ ಒಡೆಯುವ ಷಡ್ಯಂತರ ಧರ್ಮಸ್ಥಳ ಪ್ರಕರಣದಲ್ಲಿ ಅಡಗಿದೆ ಎಂದು ಹಿಂದೂಗಳನ್ನು ಎಚ್ಚರಿಸಿದರು.

ಕ್ಷೇತ್ರದ ಪ್ರಭಾವ ಕುಗ್ಗಿಸಲೆತ್ನ: ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಪ್ರಭಾವ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಕ್ಷೇತ್ರದ ಮೇಲೆ ಇರುವ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆ ಕಡಿಮೆ ಮಾಡುವ ಸಂಚು ಇದಾಗಿದೆ. ಅಲ್ಲದೇ, ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಸಚಿವ ಜೋಶಿ ಹರಿಹಾಯ್ದರು.

ಯಾವ ಕಾರಣಕ್ಕೆ ಎಸ್‌ಐಟಿ ಮಾಡಿದಿರಿ?: ಧರ್ಮಸ್ಥಳ ಪ್ರಹಸನದಲ್ಲಿ ಸರ್ಕಾರ ಅದ್ಯಾವ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಿತು? ಎಂದು ಪ್ರಶ್ನಿಸಿದ ಸಚಿವರು, ಮೊದಲು ಬುರುಡೆ ತಂದವನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕಿತ್ತು. ಎಲ್ಲಿಂದ ಬುರುಡೆ ತಂದ? ಎಂಬ ಬಗ್ಗೆ ಬಾಯಿ ಬಿಡಿಸಿದ್ದರೆ ಅಲ್ಲೇ ಸತ್ಯದ ದರ್ಶನವಾಗುತ್ತಿತ್ತಲ್ಲ? ಇಷ್ಟೆಲ್ಲಾ ಹೈಡ್ರಾಮಾ ಏಕೆ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಾಕತ್ತಿದ್ದರೆ ಬೇರೆ ಶ್ರದ್ಧಾಕೇಂದ್ರ ಅಗೆಸಿ: ರಾಜ್ಯ ಸರ್ಕಾರ ಬುರುಡೆ ತಂದವನ ಬಗ್ಗೆ ಹಿಂದೆ ಮುಂದೆ ವಿಚಾರಿಸಲಿಲ್ಲ, ಆತನ ವಿರುದ್ಧ ತನಿಖೆ ನಡೆಸಲಿಲ್ಲ. ತರಾತುರಿಯಲ್ಲಿ ಎಸ್ಐಟಿ ರಚಿಸಿತು. ಯಾವ ಕಾರಣಕ್ಕಾಗಿ ಹೀಗೆ ಎಸ್‌ಐಟಿ ಮಾಡಿದಿರಿ? ಮೂರು ಮೂರು ಹಿರಿಯ ಅಧಿಕಾರಿಗಳನ್ನು ಬಿಟ್ಟು, ರಕ್ಷಣೆ ಕೊಟ್ಟು ಬಾಹುಬಲಿ ಬೆಟ್ಟ ಅಗೆಸಿದಿರಿ. ತಾಕತ್ತಿದ್ದರೆ ಬೇರೆ ಶ್ರದ್ಧಾಕೇಂದ್ರಗಳನ್ನೂ ಹೀಗೇ ಅಗೆಸಿ ನೋಡೋಣವೆಂದು ಸಚಿವ ಪ್ರಲ್ಹಾದ ಜೋಶಿ ಸರ್ಕಾರಕ್ಕೆ ನೇರ ಸವಾಲು ಹಾಕಿದರು.

ʼಧರ್ಮಸ್ಥಳʼದಂತಹ ಒಂದು ಹಿಂದೂ ಧಾರ್ಮಿಕ ಪರಂಪರೆಯುಳ್ಳ ಕ್ಷೇತ್ರವನ್ನು ಅದ್ಯಾವನೋ ತಲೆ ಕೆಟ್ಟವನ ಮಾತು ಕೇಳಿ ಎಲ್ಲಿ ಬೇಕಲ್ಲಿ ಅಗೆಸಿದೆ ಈ ಸರ್ಕಾರ. ಒಂದೆರೆಡಲ್ಲ 17 ಜಾಗಗಳನ್ನು ಅಗೆದರೂ ಸಮಾಧಾನ ಆಗಲಿಲ್ಲ ಇವರಿಗೆ. ಜನ ಛೀ..ಥೂ..ಎಂದು ಉಗಿದ ಮೇಲೆ ಕೈ ಬಿಟ್ಟಿತು. ಹಾಗಾದರೆ ಕಾಂಗ್ರೆಸ್‌ ಸರ್ಕಾರದ ಬುರುಡೆಯಲ್ಲಿ ಏನಿತ್ತು? ಎಂದು ಪ್ರಶ್ನಿಸಿದರು.

ಹಿಂದೂ ತಿರಸ್ಕಾರ ಕಾಂಗ್ರೆಸ್‌ ರಕ್ತದಲ್ಲೇ ಬಂದಿದೆ: ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಹಿಂದೂಗಳ ವಿರುದ್ಧ ಹಾಗೂ ತುಷ್ಟೀಕರಣದ ಪರವಾಗಿದೆ. ಸದಾ ಕಾಲಕ್ಕೂ ಹಿಂದೂ ಸಮಾಜವನ್ನು ತಿರಸ್ಕಾರ ಮಾಡುವುದು, ಅಲ್ಪಸಂಖ್ಯಾರ ತುಷ್ಟೀಕರಣ ಮಾಡುವುದು ಇವರ ರಕ್ತದಲ್ಲೇ ಬಂದಿದೆ. ವೋಟ್‌ ಬ್ಯಾಂಕ್‌ಗಾಗಿ ಎಂದೆಂದಿಗೂ ಹಿಂದೂಸ್ತಾನ, ಹಿಂದೂ ಸಮಾಜವನ್ನು ತಿರಸ್ಕರಿಸಿ ಪಾಕಿಸ್ತಾನವನ್ನು ಓಲೈಸುವ ಕೆಲಸ ಮಾಡಿದವರು ಕಾಂಗ್ರೆಸ್ಸಿಗರು ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ಶಬರಿಮಲೆ ಆಯ್ತು..ಈಗ ಧರ್ಮಸ್ಥಳ ಟಾರ್ಗೆಟ್‌: ಶಬರಿಮಲೆ ಮೇಲೆ ದಾಳಿ ನಡೆಸಿದ್ದಾಯಿತು, ಈಗ ಧರ್ಮಸ್ಥಳವನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ಹಿಂದೂಗಳು ಹೆದರಬೇಕಿಲ್ಲ. ದೇಶದ ಹಿತದೃಷ್ಟಿಯಿಂದಲೇ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವಿದೆ. ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.

ಚಾಮುಂಡಿ ಬೆಟ್ಟವನ್ನೂ ಹೊಡೆಯಲು ಹೊರಟಿದ್ದೀರಾ? ಮೈಸೂರು ಚಾಮುಂಡೇಶ್ವರಿ ಬೆಟ್ಟ ಹಿಂದೂಗಳದ್ದಲ್ಲ ಎನ್ನುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌ ಮುಜರಾಯಿ ಇಲಾಖೆಗೆ ಸೇರಿದ್ದೆಂಬ ವಾದ ಮುಂದಿಡುತ್ತಿದ್ದಾರೆ. ಇದನ್ನೂ ಹೊಡೆಯಲು ಹೊರಿಟಿದ್ದೀರೋ ಹೇಗೆ? ರಾಮನಗರದಲ್ಲಿ ತಲತಲಾಂತರದಿಂದ ಇದ್ದ ಕಪಾಲಿ ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೊರಟವರು ಚಾಮುಂಡೇಶ್ವರಿ ಬೆಟ್ಟವನ್ನೂ ಹಾಗೇ ಮಾಡಲು ಹೊರಟಿದ್ದಿರೋ ಹೇಗೆ? ಎಂದು ಡಿಕೆಶಿ ವಿರುದ್ಧ ಪ್ರಲ್ಹಾದ ಜೋಶಿ ಗುಡುಗಿದರು.

ಬಾನು ಮುಷ್ತಾಕ್‌ ವಿರುದ್ಧ ವಾಗ್ದಾಳಿ: ಮೈಸೂರು ದಸರಾ ಉದ್ಘಾಟನೆಗೆ ಮುಂದಾಗಿರುವ ಬಾನು ಮುಷ್ತಾಕ್‌ ಮೊದಲು ಭುವನೇಶ್ವರಿ ಮಾತೆ, ಚಾಮುಂಡೇಶ್ವರಿ ಮಾತೆಯನ್ನು ಒಪ್ಪಿಕೊಳ್ಳುತ್ತೇನೆ, ತಲೆಬಾಗತ್ತೇನೆಂದು ಹೇಳಲಿʼ ಎಂಬ ಸವಾಲನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಂದಿಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ನಿಮ್ಮ-ಭಾರತ ಸಂಬಂಧಕ್ಕೆ ನಮ್ಮ ತಕರಾರಿಲ್ಲ ಆದರೆ, ನಮ್ಮ ಬಾಂಧವ್ಯ ಗಟ್ಟಿಗೊಳಿಸೋಣ: ರಷ್ಯಾಗೆ ಪಾಕ್ ಮನವಿ

ಎರಡು ಗಂಟೆ ಮಳೆ - 20 ಕಿ.ಮೀ. ಟ್ರಾಫಿಕ್ ಜಾಮ್: ಮಿಲೇನಿಯಮ್ ಸಿಟಿ ನಗರಾಭಿವೃದ್ಧಿ ಟ್ರಿಪಲ್ ಎಂಜಿನ್ ಮಾದರಿ: BJP ಕಾಲೆಳೆದ ಕಾಂಗ್ರೆಸ್!

'ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಮನೆ ನಾಯಿ ಭಾಗವಹಿಸಿತ್ತೆಂದು ಬಹಿರಂಗ ಪಡಿಸಲಿ: ರಾಜ್ಯ ಸರ್ಕಾರದಲ್ಲಿ ಬಚ್ಚಲುಬಾಯಿ ಮಂತ್ರಿಗಳು!'

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

SCROLL FOR NEXT