ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸಂತ್ರಸ್ತ ರೈತರಿಗೆ ಆಯಾ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೂ ಪರಿಹಾರ ನೀಡಲು ತೀರ್ಮಾನಿಸಿಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರದ ಲೋಗೋ, ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“2013ರ ಕಾಯ್ದೆ ಅನುಸಾರ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲು ತೀರ್ಮಾನಿಲಾಗಿದೆ. ಜಿಲ್ಲಾಡಳಿತ ಕಾನೂನು ಮಾನದಂಡಗಳ ಆಧಾರದ ಮುಖ್ಯರಸ್ತೆ ಬಳಿ ಇರುವ ಜಮೀನಿಗೆ, ಒಳಭಾಗದಲ್ಲಿರುವ ಜಮೀನಿಗೆ ದರ ನಿಗದಿ ಮಾಡಲಿದೆ. ರೈತರಿಗೆ ಯಾವುದೇ ರೀತಿ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ರಾಜ್ಯದ ಯಾವುದೇ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೈಗೊಳ್ಳಲಾಗದ ತೀರ್ಮಾನವನ್ನು ಇಲ್ಲಿ ಮಾಡಿದ್ದೇವೆ. ಹಣ ಪಡೆಯದೇ ಭೂಮಿಯನ್ನು ಹಂಚಿಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಲಾಗುವುದು” ಎಂದು ತಿಳಿಸಿದರು..
“ಇದರ ಜೊತೆಗೆ ಅಂತಿಮ ಅಧಿಸೂಚನೆಯ ದಿನಾಂಕದಿಂದ ಹಣಕಾಸು/ ಅಭಿವೃದ್ಧಿಪಡಿಸಿದ ಜಾಗವನ್ನು ಪರಿಹಾರ ನೀಡುವವರೆಗೆ ರೈತರ ಜೀವನೋಪಾಯಕ್ಕೆ ಪ್ರತಿ ಎಕರೆಗೆ ವಾರ್ಷಿಕ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಖುಷ್ಕಿ ಭೂಮಾಲೀಕರಿಗೆ ವಾರ್ಷಿಕವಾಗಿ 30 ಸಾವಿರ, ತರಿ ಭೂಮಾಲೀಕರಿಗೆ ವಾರ್ಷಿಕವಾಗಿ 40 ಸಾವಿರ, ಭಾಗಾಯ್ತು ಭೂ ಮಾಲೀಕರಿಗೆ ವಾರ್ಷಿಕ 50 ಸಾವಿರ ಅನುದಾನ ನೀಡಲಾಗುವುದು. ಭೂ ರತಹಿತ ಕಾರ್ಮಿಕರಿಗೆ ಹಾಗೂ ಭೂಮಿಯ ದಾಖಲೆ ಇಲ್ಲದವರಿಗೆ ಒಂದು ನಿವೇಶನ ಹಾಗೂ ವಾರ್ಷಿಕ 25 ಸಾವಿರ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಇದೆಲ್ಲದರ ಜೊತೆಗೆ ಆದಾಯ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಇನ್ನು ಈ ನಗರಕ್ಕೆ ಕಲ್ಪಿಸಲಾಗುವ ರಸ್ತೆ ಸಂಪರ್ಕಕ್ಕೆ ಜಮೀನು ಕಳೆದುಕೊಳ್ಳುವವರಿಗೂ ಇದೇ ಮಾದರಿಯ ಪರಿಹಾರವನ್ನು ನೀಡಲಾಗುವುದು. ರೈತರು ದಾಖಲೆ ಸಮೇತ ಪರಿಹಾರಕ್ಕೆ ಅರ್ಜಿ ಹಾಕಿದರೆ, ಮೂರು ದಿನಗಳಿಂದಲೇ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.
ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೋ ಇಲ್ಲವೋ, ಆದರೆ ಈ ಐತಿಹಾಸಿಕ ತೀರ್ಮಾನವನ್ನು ಈ ಭಾಗದ ಜನ ನಮ್ಮನ್ನು ಸ್ಮರಿಸಲಿದ್ದಾರೆ. ಈ ಸಂದರ್ಭದಲ್ಲಿ ಪರಿಹಾರ ಬೇಕು ಎಂದು ಅರ್ಜಿ ಹಾಕಿರುವ ಸಹೋದರಿ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆ ಜಾರಿಗೆ ತಮ್ಮ ತಕರಾರು ಇಲ್ಲ ಎಂದು 78% ರೈತರು ಜಮೀನು ನೀಡಲು ಮುಂದಾಗಿದ್ದಾರೆ. 18% ರೈತರು ಮಾತ್ರ ಭೂಸ್ವಾಧೀನ ಮಾಡಬೇಡಿ ಎಂದು ಕೇಳುತ್ತಿದ್ದಾರೆ. ನಾನು ಇವರಿಗೆ ಕೈಮುಗಿದು ಪ್ರಾರ್ಥಿಸುತ್ತೇನೆ, ನಾನು ವೈಯಕ್ತಿಕವಾಗಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ನಾನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ ನನ್ನನ್ನು ಕ್ಷಮಿಸಿ” ಎಂದು ತಿಳಿಸಿದರು.
ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆ (AI) ನಗರ
“ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಮೂಲಕ ದೇಶದ ಮೊದಲ ಇಂಟೆಗ್ರೇಟೆಡ್ ಕೃತಕ ಬುದ್ಧಿಮತ್ತೆ (AI) ನಗರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. 9,000 ಎಕರೆಯಷ್ಟು ಪ್ರದೇಶದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಭವಿಷ್ಯದಲ್ಲಿ ಇದು ಬೆಂಗಳೂರಿನ ಕೇಂದ್ರ ವ್ಯವಹಾರ ಜಿಲ್ಲೆಯಾಗಲಿದೆ (Central Business District). ಈ ನಗರವನ್ನು ಕೆಲಸ-ವಾಸ-ಉಲ್ಲಾಸ (Work-Live-Play) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ” ಎಂದು ತಿಳಿಸಿದರು.
ಶೂನ್ಯ ಟ್ರಾಫಿಕ್ ಜಾಮ್ ಪಟ್ಟಣ
“ಈ ನಗರ ನಿರ್ಮಾಣದಿಂದ ವ್ಯಾಪಾರ ಹಾಗೂ ಆರ್ಥಿಕತೆಗೆ ಉತ್ತೇಜನ ನೀಡಲಾಗುವುದು. ಈ ನಗರದ 2 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶವನ್ನು ಎಐ ಆಧಾರಿತ ಉದ್ದಿಮೆಯ ಜಾಗತಿಕ ಹೂಡಿಕೆದಾರರಿಗಾಗಿ ಮೀಸಲಿಡಲಾಗುವುದು. ಈ ಪಟ್ಟಣವನ್ನು ಶೂನ್ಯ ಟ್ರಾಫಿಕ್ ಜಾಮ್ ಪಟ್ಟಣವಾಗಿ ನಿರ್ಮಿಸಲು ಅನೇಕ ಯೋಜನೆ ಕೈಗೊಳ್ಳಲಾಗಿದೆ. ಈ ನಗರವು 300 ಮೀ. ಅಗಲದ ಬಿಸಿನೆಸ್ ಕಾರಿಡಾರ್ ಮೂಲಕ ಎಲ್ಲಾ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಈ ನಗರವನ್ನು 9 ಕಿ.ಮೀ ದೂರದಲ್ಲಿರುವ ಎಸ್ ಟಿಆರ್ ಆರ್ ರಸ್ತೆಗೆ, 11 ಕಿ.ಮೀ ದೂರದಲ್ಲಿರುವ ನೈಸ್ ರಸ್ತೆಗೆ, 5 ಕಿ.ಮೀ ದೂರದಲ್ಲಿರುವ ಮೈಸೂರು-ಬೆಂಗಳೂರು ಹೆದ್ದಾರಿಗೆ ಹಾಗೂ 2.2 ಕಿ.ಮೀ ದೂರದಲ್ಲಿರುವ ಬೆಂಗಳೂರು ದಿಂಡಗಲ್ ಹೆದ್ದಾರಿಗೆ ಸಂಪರ್ಕ ಸಾಧಿಸಲಾಗುವುದು. ಎಲ್ಲಾ ದಿಕ್ಕಿನಿಂದ 70 ಮೀಟರ್ ಅಗಲದ ಮುಖ್ಯರಸ್ತೆ, ವರ್ತುಲ ರಸ್ತೆ ಹಾಗೂ ಎಕ್ಸ್ ಪ್ರೆಸ್ ವೇ ಲಿಂಕ್ ಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು. ಮುಂದಿನ ದಿನಗಳಲ್ಲಿ ಮೆಟ್ರೋ ಸಂಪರ್ಕವನ್ನು ವಿಸ್ತರಿಸುವ ಆಲೋಚನೆ ಇದೆ” ಎಂದು ವಿವರಿಸಿದರು.
“ಈ ಯೋಜನೆಯಲ್ಲಿ ರೈತರಿಗೂ ಸಹಭಾಗಿತ್ವ ವಹಿಸಬೇಕು ಎಂದು ತೀರ್ಮಾನಿಸಿದ್ದು, ರೈತರಿಗೆ ಉತ್ತಮ ಬೆಲೆ ಸಿಗಬೇಕು ಎಂಬುದು ನಮ್ಮ ಚಿಂತನೆ. ಈ ಅಧಿಸೂಚನೆಗೆ ಒಳಪಟ್ಟ ಪ್ರದೇಶದಲ್ಲಿರುವ ವಾಸಸ್ಥಳಗಳನ್ನು ಉಳಿಸಲಾಗುತ್ತದೆ. ಭೂಸ್ವಾಧೀನ ಮಾಡುವುದಿಲ್ಲ. ಈ 26 ಹಳ್ಳಿಗಳನ್ನು ನಗರ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತೇವೆ. ಅಲ್ಲಿ ಶಾಲೆಗಳು, ಹಳ್ಳಿಯ ಸುತ್ತ 50 ಮೀ. ರಿಂಗ್ ರಸ್ತೆ, ಕರ್ನಾಟಕ ಪಬ್ಲಿಕ್ ಶಾಲೆ, ಆಧುನಿಕ ಆಸ್ಪತ್ರೆ, ಭೂಗತ ವಿದ್ಯುತ್ ಕೇಬಲ್, ಒಳಚರಂಡಿ ವ್ಯವಸ್ಥೆ, ಆಟದ ಮೈದಾನ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗುವುದು. ಗೃಹನಿರ್ವಹಣೆ, ಆರೋಗ್ಯಸೇವೆ, ಶಿಕ್ಷಣ, ಸಂಸ್ಕೃತಿ ಮುಂತಾದವುಗಳನ್ನು ಒಳಗೊಂಡ ಮಾದರಿಯಲ್ಲಿ ಈ ನಗರ ರೂಪಿಸಲಾಗುತ್ತಿದ್ದು, 1,100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಉದ್ಯಾನಗಳು ಮತ್ತು ಮೈದಾನಗಳನ್ನು ನಿರ್ಮಿಸಿ, ಹಸಿರು ಮತ್ತು ಸುಸ್ಥಿರ ನಗರವನ್ನಾಗಿ ಮಾಡಲಾಗುವುದು” ಎಂದು ತಿಳಿಸಿದರು.
ಹಳ್ಳಿಗಳನ್ನು ನಗರವಾಗಿ ಅಭಿವೃದ್ಧಿ:
“ದೇವೇಗೌಡರು ಹಾಗೂ ಇತರರ ಕಾಲದಲ್ಲಿ ಬಿಡದಿ ಕೈಗಾರಿಕಾ ಟೌನ್ ಶಿಪ್ ಮಾಡಿದಾಗ ಇಲ್ಲಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 5-6 ಲಕ್ಷ ಪರಿಹಾರ ನೀಡಲಾಗಿತ್ತು. ನಂತರ ಇದು 10 ಲಕ್ಷಕ್ಕೆ ಬಂದಿತ್ತು. ನನ್ನ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ. ಆದರೆ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ” ಎಂದು ವಿವರಿಸಿದರು.
“ಈ ಸಮಗ್ರ ಉಪನಗರಕ್ಕೆ 09 ಗ್ರಾಮಗಳ 8493 ಎಕರೆ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಲ್ಲಿ 750 ಎಕರೆ ಸರ್ಕಾರಿ ಹಾಗೂ 6731 ಎಕರೆ ಖಾಸಗಿ ಮಾಲೀಕತ್ವದ ಪ್ರದೇಶಗಳಾಗಿವೆ. ಉಳಿದ 1012 ಎಕರೆ ಪ್ರದೇಶಗಳು ಜಲ ಮೂಲ ಪ್ರದೇಶಗಳಾಗಿವೆ. ಈ ಯೋಜನೆಗಾಗಿ ಬಿಎಂಆರ್ ಡಿಎ ಮೂಲಕ 2950 ಕೋಟಿ ಹಾಗೂ ಕರ್ನಾಟಕ ಸರ್ಕಾರದ ಶ್ಯೂರಿಟಿಯೊಂದಿಗೆ ಹಣಕಾಸು ಸಂಸ್ಥೆಗಳ ಮೂಲಕ 17,500 ಕೋಟಿ ಸಂಗ್ರಹಿಸಲಾಗುವುದು. 20 ಸಾವಿರ ಕೋಟಿಗೂ ಆರ್ಥಿಕ ಸಂಪನ್ಮೂಲ ಪೂರ್ಣಗೊಂಡ ನಂತರ ಭೂಸ್ವಾಧೀನ ಪ್ರಕ್ರಿಯೆ ಪರಿಹಾರ ವಿತರಣೆ ಆರಂಭಿಸಲಾಗುವುದು. ಈ ಯೋಜನೆಗೆ ಒಳಪಡುವ ಭೂ ಮಾಲೀಕರಿಗೆ 2013ರ ಕಾಯ್ದೆಯ ಪ್ರಕಾರ ಪುನರ್ವಸತಿ ಹಾಗೂ ಪುನಶ್ಚೇತನ (R&R) ನೀತಿ ಜಾರಿಗೊಳಿಸಲಾಗಿದೆ” ಎಂದು ವಿವರಿಸಿದರು.
“ಇನ್ನು ಬೈರಮಂಗಲ ಕೆರೆಯ ಪುನಶ್ಚೇತನಕ್ಕೆ ತೃತೀಯ ಶುದ್ದೀಕರಣ ಮೂಲಕ ನೀರನ್ನು ತುಂಬಿಸಲು 2 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗುವುದು. 100 ಎಂಎಲ್ಡಿ ಶುದ್ದೀಕರಣ ಘಟಕ ಸ್ಥಾಪಿಸಲಾಗುವುದು” ಎಂದರು.