ಶಿರಸಿ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬುವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅಣ್ಣ ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.