ಮೈಸೂರು: ನಾಡಹಬ್ಬ ಮೈಸೂರು ದಸರಾ-2025ರ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಮೈಸೂರು ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಎಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವವರಿಗೆ ಜಿಲ್ಲಾಡಳಿತ, 6,500 ರೂಪಾಯಿ ಗೋಲ್ಡ್ ಕಾರ್ಡ್, ಟಿಕೆಟ್ ಗಳನ್ನು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ದಸರಾದಲ್ಲಿ ಗೋಲ್ಡ್ ಕಾರ್ಡ್ ಪಡೆದು ಎಲ್ಲ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಈ ಸಂಬಂಧ ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಯಾವುದಕ್ಕೆ ಎಷ್ಟು ಟಿಕೆಟ್?
ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳ ಮಾರಾಟ ಆರಂಭವಾಗಿದೆ.
ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ನಿಗದಿ ಮಾಡಲಾಗಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಟಿಕೆಟ್ 3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ 1500 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್ಲೈನ್ ಮೂಲಕ ಸಹ ಪಡೆಯಬಹುದಾಗಿದೆ.
ಸಾರ್ವಜನಿಕರಿಗೆ ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in/ ಮೂಲಕ ಖರೀದಿಸಬಹುದಾಗಿದೆ.
https://mysoredasara.gov.in/ ಅಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3ರಿಂದಲೇ ಆನ್ ಲೈನ್ ನಲ್ಲಿ ಖರೀದಿಗೆ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೋಲ್ಡ್ ಕಾರ್ಡ್ ಖರೀದಿಸಿರುವವರೆಗೆ(ಒಂದಕ್ಕೆ 6500) ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ(ವಿಶೇಷ ದರ್ಶನಕ್ಕೆ), ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ. ಡ್ರೋನ್ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.