ಬೆಂಗಳೂರು: 'ನಮ್ಮ ಮೆಟ್ರೋ' ಹಳದಿ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ, ನಾಲ್ಕನೇ ರೈಲು ಈ ವಾರ ಸಂಚಾರ ಆರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಅಧಿಕಾರಿಗಳು ದೃಢಪಡಿಸಿದ್ದಾರೆ,
ಈ ಮಾರ್ಗದಲ್ಲಿ ಪ್ರಸ್ತುತ 3 ರೈಲುಗಳನ್ನು ಸಂಚರಿಸುತ್ತಿದ್ದು, 4ನೇ ರೈಲಿನ ಸೇರ್ಪಡೆ ಪೀಕ್-ಅವರ್'ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.
4ನೇ ರೈಲಿನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ವಾರ ಪ್ರಯಾಣಿಕರ ಸೇವೆಗಳಿಗೆ ಪರಿಚಯಿಸಲಾಗುವುದು. ಇದರಿಂದ ಪೀಕ್-ಅವರ್ ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳವರೆಗೆ ಕಡಿಮೆ ಮಾಡಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಸೇರ್ಪಡೆಗೊಳಿಸಲಾಗುವುದು ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌವ್ಹಾಣ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಪ್ರಯಾಣಿಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಾದ ಅಕ್ಷತಾ ಮುರಳೀಧರ್ ಅವರು ಮಾತನಾಡಿ, ಕಾಯುವಿಕೆ ಸಮಯ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ರೈಲುಗಳಿಗಾಗಿ 25 ನಿಮಿಷಗಳ ಕಾಲ ಕಾಯುವುದು ಕಷ್ಟ, ವಿಶೇಷವಾಗಿ ಜನರು ಕೆಲಸಕ್ಕೆ ಹೋಗುವ ಸಮಯಮದಲ್ಲಿ.. ಮೆಟ್ರೋ ಹಳದಿ ಮಾರ್ಗ ನನಗೆ ಸಹಾಯಕವಾಗಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕ, ಐಟಿ ವೃತ್ತಿಪರ ಪ್ರದೀಪ್ ಅವರು ಮಾತನಾಡಿ, ನಾಲ್ಕನೇ ರೈಲು ಸೇರ್ಪಡೆ ನಮ್ಮ ಕಾಯುವಿಕೆ ಸಮಯವನ್ನು 15 ನಿಮಿಷಗಳಿಗೆ ಇಳಿಸಿದೆ. ಜನಸಂದಣಿ ಸಂಪೂರ್ಣವಾಗಿ ಅಲ್ಲದಿದ್ದರೂ ಕನಿಷ್ಠ ಒಂದು ಹಂತದವರೆಗೆ ಕಡಿಮೆಯಾಗುತ್ತದೆ, ಇದರಿಂದ ಹತ್ತುವಾಗ ಮತ್ತು ಇಳಿಯುವಾಗ ಉಸಿರುಗಟ್ಟಿಸುವ ವಾತಾವರಣ ಇರುವುದಿಲ್ಲ ಎಂದು ಹೇಳಿದ್ದಾರೆ.