ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆಗೆಂದು ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.
ಚೈತನ್ಯ ಕಲ್ಯಾಣಿ (34) ಪರಾರಿಯಾಗಿರುವ ಸಜಾಬಂದಿ. ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಆತನನ್ನು ಆಗಸ್ಟ್ 3ರಂದು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೈದಿಗೆ, ಜೈಲಿನ ವೈದ್ಯರ ಸಲಹೆ ಮೇರೆಗೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್, ಸೋಮವಾರ ಮಧ್ಯಾಹ್ನ 1.00 ರಿಂದ 1.15 ರ ನಡುವೆ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ ಎಂದು ಮೂಲಗಳು ಹೇಳಿವೆ.
ಕೈದಿಯನ್ನು ಕರೆದುಕೊಂಡು ಬಂದ ಬೆಂಗಳೂರು ಕೇಂದ್ರ ಕಾರಾಗೃಹದ ವಾರ್ಡನ್ ವೈ.ಆರ್. ರಘು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಯಿ ಕ್ಯಾನ್ಸರ್ ನಿಂದಾಗಿ ಆತನಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ.. ತಪ್ಪಿಸಿಕೊಳ್ಳುವಾಗ, ಮೂವರು ನರ್ಸ್‌ಗಳು ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆತ ಬೆದರಿಸಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ವಾರ್ಡನ್ ವೈ.ಆರ್.ರಘು ಸ್ಥಳದಲ್ಲಿರಲಿಲ್ಲ ಎಂಬುದು ತಿಳಿದುಬಂದಿದೆ, ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ರಘು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೈದಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಕಾನೂನುಬದ್ಧ ಬಂಧನವನ್ನು ವಿರೋಧಿಸುವುದು ಅಥವಾ ಅಡ್ಡಿಪಡಿಸುವುದು) ಸೆಕ್ಷನ್ 262 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.