ಸಿ.ಟಿ ರವಿ 
ರಾಜ್ಯ

ಮದ್ದೂರು ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ 'ಪ್ರಚೋದನಕಾರಿ' ಭಾಷಣ: ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲು; Video

ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಒಂದು ರೀತಿ ಹಿಂದುತ್ವ ಗುಂಪುಗಳ ಶಕ್ತಿ ಪ್ರದರ್ಶನವಾಗಿ ಬದಲಾಗಿತ್ತು.

ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಎಂಎಲ್‌ಸಿ ಸಿ.ಟಿ. ರವಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೀಡಿದ ದೂರಿನನ್ವಯ ಸಿಟಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ದೂರು ಹಿನ್ನೆಲೆಯಲ್ಲಿ ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತಾ ಭಾವನೆಗಳಿಗೆ ಭಾದಕವಾಗುವಂತೆ ವೈರತ್ವ, ದ್ವ್ವ್ಷೇಷ ಉಂಟಾಗುವಂತೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಅಧಿಕಾರಿಯೊಬ್ಬರ ದೂರಿನ ಆಧಾರದ ಮೇಲೆ, ಸಿಟಿ ರವಿ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 196 (1) (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಹಾನಿಕರವಾದ ಕೃತ್ಯಗಳನ್ನು ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 7ರಂದು ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಬುಧವಾರ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಒಂದು ರೀತಿ ಹಿಂದುತ್ವ ಗುಂಪುಗಳ ಶಕ್ತಿ ಪ್ರದರ್ಶನವಾಗಿ ಬದಲಾಗಿತ್ತು.

ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 22 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಭಾನುವಾರ ನಡೆದ ಹಿಂಸಾಚಾರದ ನಂತರ ಮದ್ದೂರು ಮತ್ತು ಹತ್ತಿರದ ಪ್ರದೇಶಗಳಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಸೋಮವಾರ ಬಲಪಂಥೀಯ ಗುಂಪುಗಳಿಂದ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿದ್ದವು. ತರುವಾಯ ಬಿಜೆಪಿ ಮಂಗಳವಾರ ಮದ್ದೂರು ಬಂದ್‌ಗೆ ಕರೆ ಕೊಟ್ಟಿತ್ತು.

ಮದ್ದೂರಿನಲ್ಲಿ ಮಾತನಾಡಿದ್ದ ಸಿಟಿ ರವಿ ಅವರು ನಾವು ಇಲ್ಲೇ ಇರುವವರು ತೊಡೆ ತಟ್ಟೋ ಕೆಲಸ ಮಾಡಬೇಡಿ. ತೊಡೆ ಮುರಿತ್ತೀವಿ ತಲೆಯೂ ತೆಗೆತ್ತೀವಿ ಕಲ್ಲು ಹೊಡೆಯುವವರನ್ನು ಕಲ್ಲಿನ ಒಳಗಡೆ ಸಮಾಧಿ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ ಎಂಬ ಭಾಷಣ ಮಾಡಿದ್ದರು.

ಕೇಸ್ ದಾಖಲಿಸಿದರೆ ಹೆದರಲ್ಲ; ಸಿಟಿ ರವಿ

ಈ ನಡುವೆ ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಿಟಿ ರವಿ ಅವರು, ನನ್ನ ವಿರುದ್ಧ ಪ್ರಕರಣ ದಾಖಲಿಸಿದ ತಕ್ಷಣ ನಾನು ಹೆದರಲ್ಲ. ಜನತೆಗಾಗಿ, ಹಿಂದುತ್ವಕ್ಕಾಗಿ ನನ್ನ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.

ನನ್ನ ಮೇಲೆ ಪ್ರಕರಣಗಳು ಹೊಸದೇನಲ್ಲ, ಪ್ರಕರಣ ದಾಖಲಿಸಿ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಪ್ರಕರಣ ದಾಖಲಾಯಿತು ಎಂದು ಭಯಪಟ್ಟು ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದ್ದಾರೆ.

ನಮ್ಮನ್ನು ಪ್ರಚೋದನೆ ಮಾಡಿದ್ದು ಯಾರು? ಕಲ್ಲು ತೂರಾಟ ಮಾಡಿರುವವರಲ್ಲವೇ? ಪ್ರಚೋದನೆಗಳಿಗೆ ಪ್ರತಿಕ್ರಿಯೆ ಇರುತ್ತದೆ ಎಂದು ನಾನು ಹೇಳಿದ್ದೇನೆ. ಪ್ರಕರಣ ದಾಖಲಿಸಲಿ ಭಯವಿಲ್ಲ. ಜನತೆಗಾಗಿ ನನ್ನ ಹೋರಾಟ ಮುಂದುವರೆಯುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಾಹಸಸಿಂಹ ವಿಷ್ಣುವರ್ಧನ್, ಸರೋಜಾದೇವಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ABVP ಕಾರ್ಯಕ್ರಮದಲ್ಲಿ ಭಾಗಿಯಾದ ವಿಚಾರ: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದೇನು? Video

ಬೆಂಗಳೂರು: ಮಹಿಳೆ ಮೇಲೆ ಹಲ್ಲೆ; BMTC ಡ್ರೈವರ್ ತಾತ್ಕಾಲಿಕ ವಜಾ; ಮುತ್ತಿಕ್ಕುವಂತೆ ಪೀಡಿಸಿದ ಚಾಲಕ ಆರೀಫ್‍ಗೆ ಧರ್ಮದೇಟು!

'ಅಶ್ಲೀಲ ದೃಶ್ಯ'ದಲ್ಲಿ ನಟಿಸುವಂತೆ ನನ್ನನ್ನು ಒತ್ತಾಯಿಸಲಾಗಿತ್ತು: ಶ್ರೀರಾಮ ಚಂದ್ರ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ ಏನು?

ನಿಮ್ಮ ಕಲ್ಪನೆಗೂ ಒಂದು ಮಿತಿ ಇರಲಿ: ವಿನಯ್ ಜತೆ ಸುತ್ತಾಟ ಎಂದವರಿಗೆ ರಮ್ಯಾ ತಿರುಗೇಟು

SCROLL FOR NEXT