ಸಿಎಂ ಸಿದ್ದರಾಮಯ್ಯ  
ರಾಜ್ಯ

ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ: ಸೆಪ್ಟೆಂಬರ್ 22 ರಿಂದ ಸರ್ವೇ ಆರಂಭ; 425 ಕೋಟಿ ರೂ ವೆಚ್ಚ!

ಸೆ.22ರಿಂದ ಜಾತಿಗಣತಿ ಮರು ಸಮೀಕ್ಷೆ ನಡೆಸಲಾಗುತ್ತಿದ್ದು, ಅ.7ರವರೆಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ.

ಬೆಂಗಳೂರು: ಜಾತಿಗಣತಿ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಾತಿಗಣತಿ ಮರು ಸಮೀಕ್ಷೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಸೆ.22ರಿಂದ ಜಾತಿಗಣತಿ ಮರು ಸಮೀಕ್ಷೆ ನಡೆಸಲಾಗುತ್ತಿದ್ದು, ಅ.7ರವರೆಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಯಬೇಕು. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿದ್ದರು. ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿ 10ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗ ವಹಿಸಲಾಗಿದೆ. ಸಮಾಜದಲ್ಲಿ ಅನೇಕ ಜಾತಿಗಳು ಇದ್ದು, ವೈರುಧ್ಯತೆಯಿಂದಾಗಿ ಕೂಡಿದ್ದು, ಅಸಮಾನತೆ ಈಗಲೂ ಇದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ಒದಗಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಡಾ.ಅಂಬೇಡ್ಕರ್ ಅವರು ಹೇಳಿದಂತೆ 1950 ಜನವರಿ 26ರಂದು ಜಾರಿಯಾದಾಗ, ನಾವು ವೈರುಧ್ಯತೆಯಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಅಸಮಾನತೆಯನ್ನು ತೊಲಗಿಸಲೇ ಬೇಕು ಎಂದು ಹೇಳಿದ್ದರು.

ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಅಸಮಾನತೆಯನ್ನು ಸಂಪೂರ್ಣವಾಗಿ ತೊಲಗಿಸಲು ನಮಗೆ ಸಾಧ್ಯವಾಗಿಲ್ಲ. ಸಮಾನತೆಯನ್ನು , ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 7ಕೋಟಿ ಜನಸಂಖ್ಯೆಯಿದ್ದು, ಸುಮಾರು 2ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ.

ಪ್ರತಿಯೊಬ್ಬರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿ ಗೊತ್ತಾದರೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಾಧ್ಯವಿದೆ. ದತ್ತಾಂಶ ಸರಿಯಾಗಿ ಗೊತ್ತಾದರೆ ಮಾತ್ರ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.

ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ. ನಾವು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾಗ್ಯ ಯೋಜನೆಗಳ ಮೂಲಕ ಸಹ ಇದನ್ನು ಸಾಧಿಸಲು ಪ್ರಯತ್ನಿಸಿದ್ದೇವೆ. ಹಿಂದುಳಿದವರ ಬಡತನ, ನಿರುದ್ಯೋಗ, ಅನಕ್ಷರತೆ ಹೋಗಬೇಕಾದರೆ ವಿಶೇಷ ಪ್ರಯತ್ನದ ಅಗತ್ಯವಿದೆ ಎಂಬುವುದನ್ನು ನಾವು ತಿಳಿದಿದ್ದೇವೆ. ಈ ಹಿನ್ನೆಲೆಯಲ್ಲಿ 7ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮಧುಸೂಧನ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ಸಮೀಕ್ಷೆ ಕಾರ್ಯ ಕೈಗೊಳ್ಳಲಿದೆ.

ಆದಷ್ಟು ಎಚ್ಚರಿಕೆಯಿಂದ, ಪ್ರತಿಯೊಬ್ಬರನ್ನೂ ಒಳಗೊಂಡಂತೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಡಿಸೆಂಬರ್ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ದಸರಾ ರಜೆ ಅವಧಿಯಲ್ಲಿ ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಸಮೀಕ್ಷೆ ಕಾರ್ಯ 1.75 ಲಕ್ಷ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಲಾಗುವುದು.

ಆಯೋಗ ವೈಜ್ಞಾನಿಕವಾಗಿ, ಯಾವುದೇ ಲೋಪವಾಗದಂತೆ ಸಮೀಕ್ಷೆ ಕಾರ್ಯ ನಡೆಸಬೇಕು. ನಿಗದಿತ ಅವಧಿಯ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು. ನಾಗಮೋಹನ ದಾಸ್ ಅವರು ಒಳಮೀಸಲಾತಿ ಸಮೀಕ್ಷೆಗೆ ವಿಶೇಷ ತಂತ್ರಜ್ಞಾನ ಬಳಸಿಕೊಂಡ ರೀತಿಯಲ್ಲಿ ಈ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು. ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ UHID ವಿಶೇಷ ಸಂಖ್ಯೆಯನ್ನು ನಮೂದಿಸಲಾಗುವುದು. ಈಗಾಗಲೇ 1.55 ಲಕ್ಷ ಮನೆಗಳಿಗೆ ಸಂಖ್ಯೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನು ಸಹ ಮಾಡಲಾಗುವುದು.

ಸಮೀಕ್ಷೆ ಸಂದರ್ಭದಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಮಾಡಲಾಗುವುದು. ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಎಲ್ಲರೂ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ ಎಂದು ತಿಳಿಸಿದರು.

‌ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್‌ ನಾಯ್ಕ್ ಅವರ ಸಮಿತಿ ವೈಜ್ಞಾನಿಕ‌ ಮಾನದಂಡದಲ್ಲಿ ಸಮೀಕ್ಷೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡಲಿದ್ದಾರೆ. ಎಲ್ಲಾ ಜಾತಿ-ಧರ್ಮದವರ ದತ್ತಾಂಶ ಅಂಗೈಯಲ್ಲಿದ್ದರೆ ಮಾತ್ರ ಸಾಮಾಜಿಕ ನ್ಯಾಯದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ. ನಾವು ಬಡತನ, ನಿರುದ್ಯೋಗ, ಅನಕ್ಷರತೆ ಹೋಗಲಾಡಿದಲು ಸಂವಿಧಾನದ ಕಲಂ 15(), 16(5) ಅಡಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ಹೊಸದಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಗತಿ ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆದಷ್ಟೂ ಜಾಗ್ರತೆಯಿಂದ ಸಮೀಕ್ಷೆ ನಡೆಸಿ ವರದಿ ಕೊಡಲು ಸೂಚನೆ ನೀಡಿದ್ದೇವೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೊಳಗೆ ಸಮೀಕ್ಷೆ ಕಾರ್ಯ ನಡೆಯುತ್ತದೆ. 1,75,000 ಸರ್ಕಾರಿ ಶಾಲಾ ಶಿಕ್ಷಕರುಗಳನ್ನು ವಿಶೇಷ ಭತ್ಯೆ ನೀಡಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಶಿಕ್ಷಕರ ಭತ್ಯೆಯೇ 325 ಕೋಟಿ ರೂ. ಆಗಲಿದೆ. ಸದ್ಯ 425 ಕೋಟಿ ಹಣ ಕೊಡುವುದಾಗಿ ಹೇಳಿದ್ದೇವೆ. ಹೆಚ್ಚಿನ‌ ಹಣದ ಅಗತ್ಯಬಿದ್ದರೆ ಕೊಡುತ್ತೇವೆ ಎಂದು ತಿಳಿಸಿದರು.

ಮನೆ ಮನೆಗೂ ಕರೆಂಟ್ ಇದೆ. ಮೀಟರ್ ರೀಡರ್‌ಗಳು jio tag ಮಾಡುವ ಜೊತೆಗೆ 2 ಕೋಟಿ ಮನೆಗಳಿಗೆ ಪ್ರತ್ಯೇಕ ಗುರುತಿನ ನಂಬರ್ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲಿಗೆ ಲಿಂಕ್ ಮಾಡುವುದರ ಜೊತೆಗೆ ಮೊಬೈಲ್ ಇಲ್ಲದ ಮನೆಗಳಿಗೂ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದೇವೆ. ಒಟ್ಟು 60 ಪ್ರಶ್ನೆಗಳನ್ನು ಫೈನಲ್ ಮಾಡಲಾಗಿದ್ದು, ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಶಿಕ್ಷಕರು ಸಮೀಕ್ಷೆ ನಡೆಸಲಿದ್ದಾರೆ. ಹಿಂದಿನ ಕಾಂತರಾಜ್‌ ಆಯೋಗವು 54 ಪ್ರಶ್ನೆಗಳನ್ನು ಕೇಳಿತ್ತು ಎಂದು ಹೇಳಿದರು.

ರಾಜ್ಯದ ಜನತೆ ಒಬ್ಬರೂ ತಪ್ಪಿಸಿಕೊಳ್ಳದೆ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಾನು ಈ ಮೂಲಕ ವಿನಂತಿಸಿಕೊಳ್ಳುವೆ. ಸಹಾಯವಾಣಿ ಸಂಖ್ಯೆ (8050770004) ತೆರೆದಿದ್ದೇವೆ. ಈ ನಂಬರ್‌ಗೆ ಕರೆ ಮಾಡಿ ಕೂಡ ಸಮೀAಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಹಾಗೆಯೇ ಆನ್‌ ಲೈನ್‌ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದರು.

ಆಶಾ ಕಾರ್ಯಕರ್ತೆಯರು ನಾಳೆಯಿಂದಲೇ (ಸೆ.13) ಮನೆ ಮನೆಗೆ ಹೋಗಿ 60 ಪ್ರಶ್ನೆಗಳ ನಮೂನೆಯನ್ನು ಪ್ರತೀ ಮನೆಗೆ ತಲುಪಿಸುತ್ತಾರೆ. ಬಳಿಕ ಶಿಕ್ಷಕರು ಸಮೀಕ್ಷೆಗೆ ಬರುತ್ತಾರೆ. ಯಾರೂ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಾತಿ ಹೇಳಿಕೊಳ್ಳಲು ಕಷ್ಟ ಆದವರು ಸಹಾಯವಾಣಿಗೆ ಕರೆ ಮಾಡಿ ಜಾತಿ ಹೇಳಬಹುದು. ಯಾವುದೇ ನ್ಯೂನ್ಯತೆಗಳು ಇಲ್ಲದಂತೆ, ಹಿಂದಿನ ಸಮೀಕ್ಷೆಗಳಲ್ಲಿ ಎದುರಾದ ಯಾವುದೇ ತಾಂತ್ರಿಕ ಸಮಸ್ಯೆ ಈ ಬಾರಿ ಇಲ್ಲದಂತೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮತಾಂತರಗೊಂಡವರು ಅಥವಾ ಜಾತಿ ಗೊಂದಲ ಇದ್ದದ್ದನ್ನು ಆಯೋಗದ ತಜ್ಞರ ತಂಡ ವಿಶ್ಲೇಷಣೆ ಮಾಡಿ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Vote chori" ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ನುಸುಳುಕೋರರನ್ನು ರಕ್ಷಿಸುವ ಪ್ರಯತ್ನ ಎಂದ ಬಿಜೆಪಿ!

ಹಬ್ಬದಂದು ಯಹೂದಿಗಳ ಮತ್ತೆ ದಾಳಿ: ಸಿಡ್ನಿಯಲ್ಲಿ ಗುಂಡಿಕ್ಕಿ 10 ಮಂದಿ ಹತ್ಯೆ!

ನಟಿ Shilpa Shetty ಒಡೆತನದ ಪಬ್ ನಲ್ಲಿ ಹೈಡ್ರಾಮಾ: ಸಿಬ್ಬಂದಿ ಮೇಲೆ ಉದ್ಯಮಿ ಹಲ್ಲೆ, Video

ಸಿಲಿಕಾನ್ ಸಿಟಿ ಗಢಗಢ: ಚಳಿಗೆ ತತ್ತರಿಸಿದ ಬೆಂಗಳೂರು, 9 ವರ್ಷಗಳಲ್ಲೇ ಡಿಸೆಂಬರ್ ನಲ್ಲಿ ಅತ್ಯಂತ ಕನಿಷ್ಠ ತಾಪಮಾನ!

ಇದೇ ಮೊದಲು, ಪಾಕ್ ನ ಎರಡು ವಿವಿಗಳಲ್ಲಿ 'ಸಂಸ್ಕೃತ ಕೋರ್ಸ್' ಆರಂಭ! ಮುಂದೆ ಭಗವದ್ಗೀತೆ, ಮಹಾಭಾರತ ಕಲಿಸಲು ಪ್ಲಾನ್

SCROLL FOR NEXT