ಮಂಗಳೂರು: 2012 ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯಾಳ ಮಾವ ವಿಠಲ್ ಗೌಡ ಅವರು, ಬಂಗ್ಲೆಗುಡ್ಡೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ಸ್ಥಳ ಮಹಜರು ಸಮಯದಲ್ಲಿ ಹಲವು ಮಾನವ ಅಸ್ಥಿಪಂಜರಗಳು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಸಾಕ್ಷಿ-ದೂರುದಾರರು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಸಲ್ಲಿಸಿದ್ದ ತಲೆಬುರುಡೆ ಕುರಿತು ವಿಠಲ್ ಗೌಡ ಜೊತೆಗೆ ಬಂಗ್ಲೆಗುಡ್ಡೆಗೆ ತೆರಳಿದ ಎಸ್ಐಟಿ ಅಧಿಕಾರಿಗಳು ಎರಡು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು.
ಎಸ್ಐಟಿ ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡಿರುವ ವಿಠಲ್ ಗೌಡ, ಬಂಗ್ಲೆಗುಡ್ಡೆಯಲ್ಲಿ ನನ್ನನ್ನು ಎರಡು ಬಾರಿ ಸ್ಥಳ ಮಹಜರುಗಾಗಿ ಕರೆದೊಯ್ಯುವಾಗ, 10 ಅಡಿ ದೂರದಲ್ಲಿ ಮೂರು ವ್ಯಕ್ತಿಗಳ ಮಾನವ ಅಸ್ಥಿಪಂಜರಗಳು ಕಂಡುಬಂದಿತ್ತು. ಎರಡನೇ ಸ್ಥಳದಲ್ಲಿ, ಅನೇಕ ಅಸ್ಥಿಪಂಜರಗಳು ಕಂಡು ಬಂದಿದ್ದವು. ಕನಿಷ್ಠ ಐವರ ಅಸ್ಥಿಪಂಜರಗಳನ್ನು ನಾನು ನೋಡಿದ್ದೇನೆ. ಒಂದು ಅಸ್ಥಿಪಂಜರ ಮಗುವಿಗೆ ಸೇರಿದ ಮೂಳೆಗಳಾಗಿತ್ತು. ಸ್ಥಳದಲ್ಲಿ ಮಾಟಮಂತ್ರದ ವಸ್ತುಗಳು ಕೂಡ ಕಂಡು ಬಂದಿತ್ತು. ಅಸ್ಥಿಪಂಜರದ ಮೇಲೆ ಅವುಗಳನ್ನು ಸುರಿಯಲಾಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದೇನೆ. ಆದರೆ, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯಲಿಲ್ಲ ಎಂದು ಹೇಳಿದ್ದಾರೆ.
ಸ್ಥಳ ಮಹಜರು ಸಮಯದಲ್ಲಿ ನಾವು ಯಾವುದೇ ಅಸ್ಥಿಪಂಜರಗಳನ್ನು ವಶಪಡಿಸಿಕೊಂಡಿಲ್ಲ. ಸಾಕ್ಷಿ-ದೂರುದಾರರು ಸಾಕ್ಷ್ಯವಾಗಿ ಒದಗಿಸಿದ ತಲೆಬುರುಡೆಯನ್ನು ಬಂಗ್ಲೆಗುಡ್ಡೆಯಲ್ಲಿ ತೆಗೆಯಲಾಗಿತ್ತು ಎಂದು ವಿಠಲ್ ಗೌಡ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6 ರಂದು ಸ್ಥಳ ಮಹಜರು ನಡೆಸಿದ್ದೇವೆ. ಬುಧವಾರ, ವಿಠಲ್ ಗೌಡ ತಲೆಬುರುಡೆ ತೆಗೆದ ಮೂಲ ಸ್ಥಳದಲ್ಲೂ ಮಹಜರು ನಡೆಸಿದ್ದೇವೆ. ನಂತರ ಪ್ರಸಾರವಾದ ವೀಡಿಯೊ ಎರಡನೇ ಸ್ಥಳದದ್ದಾಗಿತ್ತು ಎಂದು ಹೆಸರು ಬಹಿರಂಗಪಡಿಸದ ಎಸ್ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ,
ಆದರೆ, ವಿಠಲ್ ಗೌಡ ಅವರು ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ನಾನು ವಿಡಿಯೋದಲ್ಲಿ ಹೇಳಿರುವುದೆಲ್ಲವೂ ನಿಜ. ಎಸ್ಐಡಿ ಕೂಡ ಸ್ಥಳಕ್ಕೆ ಬಂದು ವಿಡಿಯೋಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಎಸ್ಐಟಿ ಅಧಿಕಾರಿಗಳು ಗುರುವಾರ ಕಾರ್ಯಕರ್ತರಾದ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಮತ್ತು ವಿಟ್ಟಲ್ ಗೌಡ ಅವರನ್ನು ವಿಚಾರಣೆಗೆ ನಡೆಸಿದೆ ಎಂದು ತಿಳಿಸಿದ್ದಾರೆ.
ತಲೆಬುರುಡೆಯನ್ನು ತೆಗೆಯುವಂತೆ ಸೂಚಿಸಿದ್ದು ಗಿರೀಶ್ ಮಟ್ಟಣ್ಣವರ್ ಎಂದು ವಿಠಲ್ ಗೌಡ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆಂದು ಎಸ್ಐಟಿ ಮೂಲವೊಂದು ಮಾಹಿತಿ ನೀಡಿದೆ.
ಈ ನಡುವೆ ಪ್ರಕರಣ ಸಂಬಂಧ ಔಪಚಾರಿಕ ದೂರು ದಾಖಲಿಸಲು ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರು ಗುರುವಾರ ರಾತ್ರಿ ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ.