ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್-ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, 'ಈವರೆಗೆ 21 ಕಂತುಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿದ್ದೇವೆ. ಸುಮಾರು 1 ಕೋಟಿ 24 ಲಕ್ಷ ಮಹಿಳೆಯರು ನಮ್ಮ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಅಂತೆಯೇ 'ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
"ಅಕ್ಕ" ಪಡೆ ಕುರಿತು ಮಾತು!
ಇದೇ ವೇಳೆ ಇಂದು ಕಾರ್ಕಳ ತಾಲೂಕು ಬೈಲೂರಿನಲ್ಲಿ ನೀರೆ ಕಣಜಾರು ಗ್ರಾಮ ಪಂಚಾಯತ್‌ನ ನೂತನ ಆಡಳಿತ ಕಟ್ಟಡ ಗ್ರಾಮ ಸೌಧದ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗಾಗಿ ಶೀಘ್ರವೇ "ಅಕ್ಕ" ಪಡೆಯನ್ನು ರಚಿಸಲಾಗುತ್ತಿದೆ. ಇದು ವ್ಯವಸ್ಥಿತವಾಗಿ ಮಕ್ಕಳು, ಮಹಿಳೆಯರು ,ವೃದ್ಧರಿಗೆ ಸ್ಪಂದಿಸಲಿದೆ' ಎಂದರು.
'ಮಹಿಳಾ ಪೊಲೀಸರು , ಎನ್ ಸಿಸಿ ತರಬೇತಿ ಪಡೆದವರು ಈ ತಂಡದಲ್ಲಿ ಇರುತ್ತಾರೆ. ಪ್ರತಿ ತಾಲೂಕಿಗೆ ಒಂದು ಪಡೆ ಇರಲಿದೆ. ತರಬೇತಿ ಮತ್ತು ಶಸ್ತ್ರ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗುವುದು. ಬಸ್ ನಿಲ್ದಾಣ, ಜಾತ್ರೆ ಪರಿಸರದಲ್ಲಿ ಹೆಲ್ಪ್ ಲೈನ್ ಹಾಕುತ್ತೇವೆ. ಮೂರು ತಿಂಗಳಲ್ಲಿ ಈ ಪಡೆ ಸಜ್ಜುಗೊಳ್ಳಲಿದೆ ಎಂದರು.
ಅಲ್ಲದೆ 'ಪ್ರತಿ ಮನೆಗಳಲ್ಲಿ ಆಗುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಮನೆಯೊಳಗೆ ಆಗುವ ಅನ್ಯಾಯಗಳಿಗೂ "ಅಕ್ಕ" ಪಡೆ ಸ್ಪಂದಿಸಲಿದೆ' ಎಂದರು.
ರಾಜ್ಯದಲ್ಲಿ ಅಂಗನವಾಡಿಗಳು ಶುರುವಾಗಿ 50 ವರ್ಷ ಪೂರ್ಣಗೊಂಡಿದ್ದು, 50 ವರ್ಷಗಳ ಹಿಂದೆ ಇಂದಿರಾಗಾಂಧಿ ಆರಂಭಿಸಿದ ಕಲ್ಪನೆ ಇದು. ಮೈಸೂರಿನ ಟಿ ನರಸೀಪುರದಲ್ಲಿ ಅಂಗನವಾಡಿ ಆರಂಭಿಸಲಾಗಿತ್ತು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.