ಹಾಸನದಲ್ಲಿ ನಿನ್ನೆ ಗಣೇಶ ಮೆರವಣಿಗೆ ವೇಳೆ ನಡೆದ ಘೋರ ದುರಂತ  
ರಾಜ್ಯ

ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಯಮನಂತೆ ಜನರ ಮೇಲೆ ಹರಿದ ಟ್ರಕ್, ಸಾವಿನ ಸಂಖ್ಯೆ 9ಕ್ಕೆ ಏರಿಕೆ-Video

ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ.

ಹಾಸನ: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಾಸನದಲ್ಲಿ ಭೀಕರ ದುರಂತ ಸಂಭವಿಸಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್‌ ಹರಿದಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಐವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರಲ್ಲಿ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, 6 ಮಂದಿ ಸ್ಥಳೀಯರಾಗಿದ್ದಾರೆ. 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಗಾಯಗೊಂಡಿರುವವರೆಗ ಚಿಕಿತ್ಸೆ ಮುಂದುವರೆದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟವರು ಯುವಕರಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಿದ್ದವರು ಈ ರೀತಿ ಘೋರ ದುರಂತದಿಂದ ಇದ್ದಕ್ಕಿದ್ದಂತೆ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ.

ರಸ್ತೆಯ ಒಂದು ಬದಿಯಿಂದ ಏಕಾಏಕಿ ಡಿವೈಡರ್ ಗುದ್ದಿ ಯಮನಂತೆ ಬಂದ ಟ್ರಕ್, ನೇರವಾಗಿ ಸಾವಿರಾರು ಜನರಿದ್ದ ಮೆರವಣಿಗೆಗೆ ನುಗ್ಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಾಜಿ ಸಚಿವ ಎಚ್ಡಿ ರೇವಣ್ಣ, ಪರಿಷತ್ ಸದಸ್ಯ ಸೂರಜ್ ರೇವಣ್ಣ, ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿದ್ದು, ಈ ವೇಳೆ ಪೊಲೀಸ್ ವೈಫಲ್ಯದಿಂದ ಅವಘಡ ಸಂಭವಿಸಿದೆ ಎಂದು ರೇವಣ್ಣ ಕಿಡಿಕಾರಿದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಹ ದುರಂತ ನಡೆದ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.

ರಾಜಕೀಯ ನಾಯಕರ ಆಘಾತ

ದುರಂತ ಬಗ್ಗೆ ಸಿಎಂ ಮತ್ತು ಡಿಸಿಎಂ ಸೇರಿದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೆರವಣಿಯಲ್ಲಿ ಸಾವಿರಾರು ಜನರು ಡಿಜೆ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕುತ್ತ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಟ್ರಕ್ ವೇಗವಾಗಿ ಬಂದು ಜನರ ಮೇಲೆ ಹರಿದಿದೆ. ಇನ್ನು ಮೆರವಣಿಗೆಗೆ ಟ್ರಕ್ ನುಗ್ಗಿರುವ ಭಯಾಕನ ದೃಶ್ಯದ ವಿಡಿಯೊ ವೈರಲ್ ಆಗಿದೆ.

ಮೃತರ ವಿವರ ಇಂತಿದೆ:

1. ಪ್ರವೀಣ್ ಕುಮಾರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ

2. ರಾಜೇಶ ಬಿನ್ ಮೂರ್ತಿ 17 ವರ್ಷ ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು

3. ಈಶ್ವರ ಬಿನ್ ರವಿಕುಮಾರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು

4. ಗೋಕುಲ ಬಿನ್ ಸಂಪತ್ ಕುಮಾರ್ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು

5. ಕುಮಾರ ಬಿನ್ ತಿಮ್ಮಯ್ಯ (25 ) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.

6. ಪ್ರವೀಣ ಬಿನ್ ಹನುಮಯ್ಯ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು.

7. ಮಿಥುನ್ ಬಿನ್ ವಿಜಯ್ (23) ಗವಿಗಂಗಾಪುರ ಗ್ರಾಮ, ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.

8. ಸುರೇಶ ಬಿನ್ ರಮೇಶ ಬಿಇ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ

9. ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲ್ಲೂಕು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಿಜೋರಾಂನ ಮೊದಲ ರೈಲು ಮಾರ್ಗ ಪ್ರಧಾನಿ ಮೋದಿ ಉದ್ಘಾಟನೆ: ರಾಜ್ಯದ ಮೊದಲ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ

ಹಾಸನ ದುರಂತ: ಪ್ರಧಾನಿ ಮೋದಿ ತೀವ್ರ ಸಂತಾಪ, ತಲಾ 2 ಲಕ್ಷ ರೂ ಪರಿಹಾರ ಘೋಷಣೆ

Impose Tariffs:'ದೊಡ್ಡ ಡೀಲ್' ಗಾಗಿ ಭಾರತದ ಮೇಲೆ ಸುಂಕಾಸ್ತ್ರ; ಸಂಬಂಧದಲ್ಲಿ ಬಿರುಕು- ಡೊನಾಲ್ಡ್ ಟ್ರಂಪ್

G7 partners: ಉಕ್ರೇನ್ ನಲ್ಲಿ ರಷ್ಯಾ ಯುದ್ಧ ನಿಲ್ಲಿಸಲು ಗುರಾಣಿ; ಭಾರತ- ಚೀನಾ ಮೇಲೆ ಸುಂಕ ವಿಧಿಸುವಂತೆ G7 ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ!

'ರಷ್ಯಾದ ತೈಲ ಖರೀದಿಗೆ ಭಾರತದ ಮೇಲಿನ ಅಧಿಕ ಸುಂಕ ಹೇರಿಕೆ ಸುಲಭವಲ್ಲ, ಇದು ಸಂಬಂಧದಲ್ಲಿ ಬಿರುಕು ಉಂಟುಮಾಡುತ್ತದೆ': Donald Trump

SCROLL FOR NEXT