ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಭೀಕರ ದುರಂತ ಸಂಭವಿಸಿದ್ದು, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದ ಪರಿಣಾಮ 10 ಮಂದಿ ಮೃತಪಟ್ಟಿದ್ದಾರೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಆರು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಾಜಿ ಸಚಿವ ಎಚ್ಡಿ ರೇವಣ್ಣ, ಪರಿಷತ್ ಸದಸ್ಯ ಸೂರಜ್ ರೇವಣ್ಣ, ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿದ್ದರು. ಘಟನೆ ಕುರಿತು ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಘಟನೆ ಹೃದಯವಿದ್ರಾವಕವಾಗಿದೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದು ಸಂದೇಶ ಹಂಚಿಕೊಂಡಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ. ಇನ್ನು ಇದೇ ವೇಳೆ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಶನಿವಾರ ಹಾಸನದ ಹಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಕ್ಕೆ ಜೆಡಿಎಸ್ ನಿಂದ ತಲಾ 1 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಹಾಸನ ದುರಂತಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ಸರ್ಕಾರದಿಂದ ರೂ.5 ಲಕ್ಷ ಪರಿಹಾರ ನೀಡಿದ್ದೇವೆ. ಆದರೆ ಸಾವಿಗೆ ಸಮಾನವಾಗಿ ಪರಿಹಾರ ಕೊಡಿ ಅಂತಾ ಒತ್ತಾಯಿಸುವ ಪ್ರಯತ್ನ ಮಾಡಬಾರದು ಎಂದರು. ಇದಕ್ಕೂ ಮುನ್ನ ಸರ್ಕಾರ ನೀಡಿದ ಪರಿಹಾರವನ್ನು 10 ಲಕ್ಷಕ್ಕೆ ಏರಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. "ಮೊಸಳೆ ಹೊಸಹಳ್ಳಿ ಗಣಪತಿ ವಿಸರ್ಜನೆ ವೇಳೆ ನಡೆದ ದುರಂತಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸುತ್ತಿರುವ ಕೆಲವು ಅಹಿತ ಚಿಂತಕರು ಸಾಮಾಜಿಕ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಇಂತಹ ದುರ್ವರ್ತನೆಗಳು ಸಹ ಕಾನೂನು ರೀತಿಯ ಅಪರಾಧವಾಗಿದ್ದು, ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಇದೇ ವೇಳೆ ಎಚ್ಚರಿಸಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟ ಹೊಳೆನರಸೀಪುರ ತಾಲೂಕಿನ ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತಪಟ್ಟವರ ಕುಟುಂಬದವರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆಗೆ ಆರಂಭದಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಸಮಾಜದ ಶಾಂತಿಗೆ ಭಂಗ ತರುವ ಕೆಲಸ ಮಾಡಿದ್ರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಎಚ್ಚರಿಕೆ ನೀಡಿದ್ದಾರೆ. ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ. ಸಾಂಸ್ಕೃತಿಕವಾಗಿ ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸುತ್ತಾರೆ. ದಸರಾ ನಾಡಹಬ್ಬವಾಗಿದ್ದು, ಒಂದು ಧರ್ಮದವರು ಮಾತ್ರ ಭಾಗವಹಿಸಬೇಕು ಎಂದೇನೂ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರದ ಕುರಿತು ಅಧ್ಯಯನ ನಡೆಸಲು ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಂಪುಟ ಉಪ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ 1 ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ಆ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚಿಸಿಸಬೇಕು ಎಂದು ಕೋರಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಎಚ್.ಎಂ.ರೇವಣ್ಣ, ಡಾ.ಸಿ.ಎಸ್.ದ್ವಾರಕಾನಾಥ್, ವಿ.ಆರ್.ಸುದರ್ಶನ್, ಡಾ.ಎಲ್.ಹನುಮಂತಯ್ಯ, ಮೋಹನ್ ಕೊಂಡಜ್ಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿ ವರದಿಯನ್ನು ರಾಜ್ಯ ಸರಕಾರ ಸ್ವೀಕರಿಸಿದ್ದರೂ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಡ್ರಗ್ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೇರಿದಂತೆ 11 ಪೊಲೀಸರನ್ನು ಅಮಾನತು ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳ ಒಟ್ಟು 11 ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಚಾಮರಾಜಪೇಟೆಯ ಏಳು ಪೊಲೀಸರು ಹಾಗೂ ಜೆ.ಜೆ.ನಗರದ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.