ಆನೇಕಲ್: ಸಾಲಬಾದೆಯಿಂದ ಬದುಕು ಅಂತ್ಯಗೊಳಿಸಲು ಕುಟುಂಬವೊಂದು ಯತ್ನಿಸಿದ್ದು ಮಕ್ಕಳು-ಗಂಡ ಸಾವನ್ನಪ್ಪಿದ್ದು, ತಾಯಿ ಬದುಕುಳಿದಿದ್ದಾಳೆ. ಗಂಡನ ಚಿಕಿತ್ಸೆಗಾಗಿ ವಿಪರೀತ ಸಾಲ ಮಾಡಿದ್ದ ಕುಟುಂಬ ಕೊನೆಗೆ ಬದುಕು ಅಂತ್ಯಗೊಳಿಸಲು ಪ್ರಯತ್ನಿಸಿದೆ.
ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಗಂಡ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದೃಷ್ಟವಶಾತ್ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ ಶಿವು (32), ಮಗಳು ಚಂದ್ರಕಲಾ (11) ಮಗ ಉದಯ್ ಸೂರ್ಯ (07) ಸಾವನ್ನಪ್ಪಿದ್ದಾರೆ.
32 ವರ್ಷದ ಶಿವು ಅಪಘಾತದಲ್ಲಿ ಗಾಯಗೊಂಡಿದ್ದ. ಹೀಗಾಗಿ ಚಿಕಿತ್ಸೆ ಪಡೆಯಲು ಸಾಲ ಮಾಡಿದ್ದರು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಇದು ಅತೀವ ಹೊರೆಯಾಗಿತ್ತು. ಜೊತೆಗೆ ಗಂಡ ಚೇತರಿಸಿಕೊಳ್ಳಲು ಸುದೀರ್ಘ ದಿನಗಳು ಬೇಕಾಗಿತ್ತು.
ಅಲ್ಲಿಯವರೆಗೆ ಬದುಕು ಸಾಗಿಸಲು, ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪ್ರತಿ ದಿನ ಸಾಲದ ಹೊರೆ ಹೆಚ್ಚಾಗಿತ್ತು. ಜೊತೆಗೆ ಮಕ್ಕಳನ್ನು ಆರೈಕೆ ಮಾಡಲು, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಶಿವು ಹಾಗೂ ಮಂಜುಳಾ ದಂಪತಿ ಬದುಕು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ಮೊದಲಿಗೆ ಗಂಡ ಮತ್ತು ಮಕ್ಕಳ ಕುತ್ತಿಗೆಯನ್ನ ವೇಲ್‌ನಿಂದ ಹೆಂಡತಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಹಗ್ಗ ತುಂಡಾದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಹಿಳೆ ಬದುಕು ಅಂತ್ಯಗೊಳಿಸುವ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ.
ಹಗ್ಗ ಬಿಗಿದಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಮಹಿಳೆಗೆ ಹೊಸಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ