ಶಿವಮೊಗ್ಗ: ಹೊಳೆ ದಾಟುತ್ತಿದ್ದಾಗ ತೆಪ್ಪ ಮಗುಚಿ ಯುವಕ ನೀರುಪಾಲಾಗಿರುವ ಘಟನೆ ಶಿವಮೊಗ್ಗದಲ್ಲಿ ಭಾನುವಾರ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರದ (Hosanagar) ಹೊಸೂರು (ಸಂಪೆಕಟ್ಟೆ) ಗ್ರಾಪಂ ವ್ಯಾಪ್ತಿಯ ಬಂಟೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತನನ್ನು ಪೂರ್ಣೇಶ್ (22) ಎಂದು ಗುರುತಿಸಲಾಗಿದೆ.
ಅಂತೆಯೇ ಅದೃಷ್ಟವಶಾತ್ ಪೂರ್ಣೇಶ್ ಜೊತೆಯಲ್ಲಿದ್ದ ಮತ್ತಿಬ್ಬರು ಯುವಕರಾದ ಶರತ್ ಮತ್ತು ರಂಜನ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಚಾರ ತಿಳಿಯುತ್ತಲೇ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಪೂರ್ಣೇಶ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಸುಮಾರು 40 ಅಡಿ ಆಳದಲ್ಲಿ ಪೂರ್ಣೇಶ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಮುಳುಗು ತಜ್ಞ ಈಶ್ವರ್ ಮಲ್ಪೆ, '40 ಅಡಿ ಆಳದ ನೀರಿನಲ್ಲಿ ಈ ಯುವಕನ ಮೃತದೇಹ ದೊರೆತಿದೆ ಎಂದರು. ಅಂತೆಯೇ ತೆಪ್ಪದಲ್ಲಿ ತೆರಳುವಾಗ ಎಚ್ಚರವಾಗಿರುವಂತೆ ಸಲಹೆ ನೀಡಿದ ಅವರು, ದೋಣಿ ತೆಪ್ಪದಲ್ಲಿ ಸಾಗುವಾಗ ಲೈಫ್ ಜಾಕೆಟ್ ಇಟ್ಟುಕೊಳ್ಳುವಂತೆ ಅವರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, ಕಾಲು ಸಂಕ ನಿರ್ಮಾಣ ಮಾಡುವಂತೆ 20 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಇಷ್ಟಾದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.