ಬೆಂಗಳೂರು: ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಹೈಕೋರ್ಟ್ ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಬಾರದು ಎಂದು ಪ್ರತಾಪ್ ಸಿಂಹ, ಟಿ. ಗಿರೀಶ್ ಕುಮಾರ್ ಹಾಗೂ ಹೆಚ್. ಎಸ್. ಗೌರವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಾಧೀಶರಾದ ಸಿ. ಎಂ. ಜೋಶಿ ಅವರಿದ್ದ ನ್ಯಾಯಪೀಠ, ಅರ್ಜಿಗಳನ್ನು ವಜಾಗೊಳಿಸಿ ಆದೇಶ ಪ್ರಕಟಿಸಿತು.
ವಿಭಿನ್ನ ನಂಬಿಕೆಯ ವ್ಯಕ್ತಿಯನ್ನು ದಸರಾ ಉದ್ಘಾಟನೆ ಆಹ್ವಾನಿಸಿರುವುದರಿಂದ ಸಾಂವಿಧಾನಿಕ ಅಥವಾ ಕಾನೂನು ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಾದಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು. ಇದರಿಂದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಹೆಸರು ಆಯ್ಕೆಯಾದಾಗಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಪ್ರತಾಪ್ ಸಿಂಹ ಅವರಿಗೆತೀವ್ರ ಹಿನ್ನಡೆಯದಂತಾಗಿದೆ.
ಬಾನು ಮುಸ್ತಾಖ್ ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆಯಿಲ್ಲ. ಅವರು ಹಿಂದೂ ವಿರೋಧಿಯಾಗಿದ್ದು, ಭುವನೇಶ್ವರಿಯನ್ನು ಅಪಮಾನ ಮಾಡಿದ್ದಾರೆ. ಬಾನು ಮುಷ್ತಾಕ್ ಆ ಹೇಳಿಕೆಗಳನ್ನು ಹಿಂಪಡೆದು ಕ್ಷಮೆಯಾಚಿಸಿದರೆ, ಅವರು ಸೆಪ್ಟೆಂಬರ್ 22 ರಂದು ದಸರಾ ಉದ್ಘಾಟನೆಗೆ ನಮ್ಮ ಅಭ್ಯಂತರವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಮತ್ತೊಂದೆಡೆ ಪ್ರತಿವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ವಕೀಲರು, ಬಾನು ಮುಸ್ತಾಖ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡರು. ಅವರನ್ನು ಆಹ್ವಾನಿಸಿದ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯಲ್ಲಿ ಸರ್ವಾನುಮತದಿಂದ ಅವರ ಆಯ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
2017ರಲ್ಲಿ ಖ್ಯಾತ ಕವಿ ನಿಸ್ಸಾರ್ ಅಹಮದ್ ಅವರಿಂದ ದಸರಾ ಉದ್ಘಾಟನೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ಸರ್ಕಾರ ಹೇಳಿತು. ಆದರೆ, ಅಹ್ಮದ್ ಅವರು ಹಿಂದೂ ಧರ್ಮ ಮತ್ತು ಕನ್ನಡ ದೇವರ ವಿರುದ್ಧ ಯಾವುದೇ ಟೀಕೆ ಮಾಡಿಲ್ಲ ಎಂದು ಸಿಂಹ ಪರ ವಕೀಲರು ವಾದಿಸಿದರು.
ದಂಡ ವಿಧಿಸಬೇಕು ಎಂಬ ಎಜಿ ಶಶಿಕಿರಣ್ ಶೆಟ್ಟಿ ಮನವಿಯನ್ನು ನ್ಯಾಯಪೀಠ ನಿರಾಕರಿಸಿತು. ವಿಜಯದಶಮಿ ಎಂದರೆ ಕೆಟ್ಟದ್ದರ ವಿರುದ್ಧ ಗೆಲುವಿನ ಎಂಬ ಅರ್ಥದಲ್ಲಿ ದೇಶಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದರಲ್ಲಿ ಧರ್ಮ ತೂರಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.