ಬೆಂಗಳೂರು: ಭಾರತೀಯ ವಾಯುಪಡೆಯ ಎಂಜಿನಿಯರ್ ಒಬ್ಬರು ಭಾನುವಾರ ಸಂಜೆ ಅಪಾರ್ಟ್ ಮೆಂಟ್ ನ 24ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತನನ್ನು ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನ 24 ನೇ ಮಹಡಿಯಿಂದ ಭಾರತೀಯ ವಾಯುಪಡೆಯ ಎಂಜಿನಿಯರ್ ಲೋಕೇಶ್ ಜಿಗಿದಿದ್ದಾರೆ.
ನಿನ್ನೆ ಸಂಜೆ ಲೋಕೇಶ್ ತಮ್ಮ ಸಹೋದರಿ ಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದರು, ಯಾವುದೋ ವಿಷಯದಿಂದ ಅವರ ಮನಸ್ಥಿತಿ ಹಾಳಾಗಿತ್ತು ಆ ಕ್ಷಣದಲ್ಲಿ ಅವರು ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.