ಬೆಂಗಳೂರು: ಬಸ್ ಚಾಲನೆ ವೇಳೆ ಹೃದಯಾಘಾತವಾಗಿದ್ದರೂ, ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿ 45ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿ ಕೆಎಸ್ಆರ್'ಟಿಸಿ ಬಸ್ ಚಾಲಕರೊಬ್ಬರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ರಾಜೀವ್ ಬೀರಸಾಲ್ (56) ಹೃದಯಾಘಾತದಿಂದ ಮೃತರಾದ ಚಾಲಕ. ಇವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನವರಾಗಿದ್ದು ಸುಮಾರು 20 ವರ್ಷಗಳಿಂದ ಕೆಎಸ್‌ಆರ್‌ಟಿಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳವಾರ ಬೆಂಗಳೂರಿಂದ ಹರಿಹರಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್'ನ್ನು ರಾಜೀವ್ ಬೀರಸಾಲ್ ಅವರು ಚಲಾಯಿಸುತ್ತಿದ್ದರು.
ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ರಾಜೀವ್ ಬೀರಸಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಸಂಭಾವ್ಯ ಅಪಘಾತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ನಿಲ್ಲಿಸಿದ ಕೂಡಲೇ ರಾಜೀವ್ ಅವರು ಕೆಳಗೆ ಬಿದ್ದಿದ್ದು, ಇದನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ಸ್ಥಳಕ್ಕೆ ಬರುವ ವೇಳೆಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರಾಜೀವ್ ಅವರು ಕೊನೆಯುಸಿರೆಳೆದಿದ್ದಾರೆ. ಪ್ರಾಣ ಹೋಗುವ ನೋವಿನಲ್ಲೂ ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕನಿಗೆ ಜನ ಕಂಬನಿ ಮಿಡಿದಿದ್ದಾರೆ.