ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ತೆಗೆದುಕೊಂಡ ಸಾಲ ಮರುಪಾವತಿಸಲು ಸರ್ಕಾರಿ ಅಧಿಕಾರಿಯ ಮನೆಯಲ್ಲಿ ದರೋಡೆ ಮಾಡಿದ್ದಕ್ಕಾಗಿ ಇಬ್ಬರು ರೌಡಿಶೀಟರ್‌ಗಳು ಸೇರಿದಂತೆ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತನ್ನು ಅಬ್ರಹಾಂ ಅಲಿಯಾಸ್ ಅಭಿ (24), ಧನುಷ್ ಅಲಿಯಾಸ್ ದಡಿಯಾ (25), ಎಂ ಕೆ ನಿಖಿಲ್ (25) ಎಂದು ಗುರ್ತಿಸಲಾಗಿದೆ.
ಧನುಷ್ ಹಾಗೂ ಅಬ್ರಹಾಂ ಇಬ್ಬರೂ ರೌಡಿಶೀಟರ್ ಗಳಾಗಿದ್ದು, ನಿಖಿಲ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳಿರುವುದಾಗಿ ತಿಳಿದುಬಂದಿದೆ.
ಕೊಲೆ ಪ್ರಕರಣದಲ್ಲಿ ಧನುಷ್ ಹಾಗೂ ಅಬ್ರಹಾಂ ಜೈಲು ಸೇರಿದ್ದರು, ಸಾಲ ಪಡೆದು ಜಾಮೀನಿನ ಮೇಲೆ ಹೊರ ಬಂದಿದ್ದರು. ಸಾಲ ಮರುಪಾವತಿಗಾಗಿ ಇಬ್ಬರೂ ಸರ್ಕಾರಿ ಅಧಿಕಾರಿಯ ಮನೆಯೊಂದಕ್ಕೆ ನುಗ್ಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ಬೆಳ್ಳಿ ವಸ್ತುಗಳು, ನಗದು ಮತ್ತು ಕೈಗಡಿಯಾರಗಳನ್ನು ಕದ್ದಿದ್ದಾರೆ.
ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಧಿಕಾರಿ ಊರಿಗೆ ತೆರಳಿದ್ದಾಗ ದರೋಡೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಪೊಲೀಸರು 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದ ನಂತರ ಆಕತರೋಪಿಗಳನ್ನು ಬಂಧಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿದ್ದ ಅಭಿ ಮತ್ತು ಧನುಷ್ ಜಾಮೀನು ಪಡೆಯಲು ಸಾಲ ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಸಾಲವನ್ನು ಮರುಪಾವತಿಸಲು, ಇಬ್ಬರು ನಿಖಿಲ್ ಜೊತೆಗೆ ಕಳ್ಳತನಕ್ಕೆ ಯೋಜನೆ ರೂಪಿಸಿದ್ದಾರೆ. ಕದ್ದ ಕೆಲವು ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ ನಂತರ, ಆರೋಪಿಗಳು ಗೋವಾ ಮತ್ತು ಕೇರಳಕ್ಕೆ ಪರಾರಿಯಾಗಿದ್ದರು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳದಂತೆ ಪ್ರತಿದಿನ ಹೊಸ ಇನ್‌ಸ್ಟಾಗ್ರಾಮ್ ಖಾತೆಗಳನ್ನು ರಚಿಸಿ, ಫೋನ್ ಕರೆಗಳ ಬದಲಿಗೆ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ಆಪ್ತರೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಪೊಲೀಸರು 423 ಗ್ರಾಂ ಚಿನ್ನಾಭರಣಗಳು, 710 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 4,000 ರೂ. ನಗದು ವಶಪಡಿಸಿಕೊಂಡಿದ್ದು, ಒಟ್ಟು 50 ಲಕ್ಷ ರೂ. ಮೌಲ್ಯದ ಹಣ ವಶಪಡಿಸಿಕೊಂಡಿದ್ದಾರೆ.