ಬೆಂಗಳೂರು: ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ಅವರನ್ನು ಒಂಬತ್ತು ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿದೆ.
ಹಣ ವರ್ಗಾವಣೆ ಮತ್ತು ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಮಂಗಳವಾರ ಇಡಿ ಅಧಿಕಾರಿಗಳ ಮುಂದೆ ಹಾಜರಾದ ದಿನೇಶ್ ಕುಮಾರ್ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು.
ರಾತ್ರಿ ನ್ಯಾಯಾಧೀಶರ ಮನೆ ಹಾಜರುಪಡಿಸಿ 1 ದಿನ ಕಸ್ಟಡಿಗೆ ಪಡೆದುಕೊಂಡಿದ್ದ ಇಡಿ, ಬುಧವಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು.
ವಿಚಾರಣೆ ಸಮಯದಲ್ಲಿ ದಿನೇಶ್ ಕುಮಾರ್ ಪರವಾಗಿ ಹಾಜರಾದ ವಕೀಲರು, ಒಂದು ವರ್ಷದಿಂದ ಸುಮ್ಮನಿದ್ದ ಇಡಿ ಅಧಿಕಾರಿಗಳು ಈಗ ತನಿಖೆಗೆ ದಿನೇಶ್ ಬೇಕು ಎನ್ನುತ್ತಿದ್ದಾರೆ. ಇಷ್ಟು ದಿನ ಬಂಧನ ಮಾಡದೇ ಇದ್ದವರನ್ನು ಈಗ ಬಂಧಿಸಿದ್ದು ಯಾಕೆ? ಈಗಾಗಲೇ ಬ್ಯಾಂಕ್ ವಿವರಗಳನ್ನು ಎಲ್ಲವನ್ನೂ ನೀಡಿದ್ದು ಈಗ ಮತ್ತೆ ಕಸ್ಟಡಿಗೆ ಕೇಳುವುದು ಸರಿಯಲ್ಲ ಎಂದು ವಾದಿಸಿದರು.
ನಮ್ಮ ಕಕ್ಷಿದಾರರು, ಅಸ್ತಮಾ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿ ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಮಧ್ಯಂತರ ಜಾಮೀನು ಆದೇಶ ಉಲ್ಲೇಖಿಸಿ ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಈ ವೇಳೆ ಜಡ್ಜ್, ದಿನೇಶ್ ಕುಮಾರ್ ರಾಜಕಾರಣಿ ಅಲ್ಲ. ಮುಡಾ ಪ್ರಕರಣದಲ್ಲಿ ಈ ಅಂಶವನ್ನು ಪ್ರಸ್ತಾಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇಡಿ ಪರ ವಕೀಲರು ನಮಗೆ ತನಿಖೆಗೆ ಬೇಕಾದ ಅಗತ್ಯ ದಾಖಲೆಗಳು ಸಿಕ್ಕಿದ್ದು, 14 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ಸೆ. 26 ರಂದು ಸಂಜೆ 5 ಗಂಟೆಗೆ ದಿನೇಶ್‌ಕುಮಾರ್ ಅವರನ್ನು ಹಾಜರುಪಡಿಸಬೇಕು ಎಂದು ಇಡಿಗೆ ಸೂಚಿಸಿತು.