ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ 4.8 ಕೋಟಿ ರೂಪಾಯಿ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾದಾವರ ಗ್ರಾಮದಲ್ಲಿ ಗೋವಿಂದಪ್ಪನವರ ಮನೆಯಲ್ಲಿ ಪತ್ತೆಯಾದ 4.8 ಕೋಟಿ ರೂ.ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ತಂಡ ಕೆ ಸುಧಾಕರ್ ವಿರುದ್ಧ ಕೇಸ್ ದಾಖಲಿಸಿತ್ತು.
ಗೋವಿಂದಪ್ಪ ಎಂಬುವವರ ನಿವಾಸದಲ್ಲಿ ನಗದು ವಶಪಡಿಸಿಕೊಂಡ ನಂತರ ಸುಧಾಕರ್ ಅವರು ಎಪ್ರಿಲ್ 25 ರಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸಾಪ್ ಕರೆ ಮಾಡಿ, ಸಹಾಯಕ್ಕಾಗಿ ಮನವಿ ಮಾಡಿದ್ದಾರೆ ಮತ್ತು ಸಂದೇಶ ಕುಳುಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ನಡುವೆ ತಮ್ಮ ವಿರುದ್ಧದ ವಿಚಾರಣೆ ರದ್ದು ಕೋರಿ ಸುಧಾಕರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ, ಪ್ರಕರಣ ರದ್ದುಪಡಿಸುವಂತೆ ಆದೇಶಿಸಿದೆ.