ಬೆಂಗಳೂರು: ದೂರು ದಾಖಲಿಸಲು ಬಂದ ಮಂಗಳಮುಖಿಯರು, ನಂತರ ಪೊಲೀಸರನ್ನೇ ನಿಂದಿಸಿ, ದಾಂಧಲೆ ನಡೆಸಿರುವ ಘಟನೆ ನಗರದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅಪರಿಚಿತ ವ್ಯಕ್ತಿಯೋರ್ವ ಮಂಗಳಮುಖಿಯೊಬ್ಬರೊಂದಿಗೆ ಕೆಟ್ಟದಾಗಿ ವರ್ತಿಸಿದ್ದು, ಆತನ ವಿರುದ್ಧ ದೂರು ದಾಖಲಿಸಲು ಮಂಗಳಮುಖಿಯರ ಗುಂಪೊಂದು ಸೋಮವಾರ ಬೆಳಗಿನ ಜಾವ 2.10ರ ಸುಮಾರಿಗೆ ಆಡುಗೋಡಿ ಪೊಲೀಸ್ ಠಾಣೆಗೆ ಬಂದಿದೆ.
ಆದರೆ, ದೂರು ದಾಖಲಿಸದೆ, ಪೊಲೀಸ್ ಸಿಬ್ಬಂದಿಯನ್ನೇ ನಿಂದಿಸಿ, ಅವಮಾನಿಸಲು ಆರಂಭಿಸಿದ್ದಾರೆ. ದೂರು ದಾಖಲಿಸುವಂತೆ ತಿಳಿಸಿದರೂ, ಪೊಲೀಸರ ಮೇಲೆಯೇ ದೌರ್ಜನ್ಯ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂಬುದು ತಿಳಿದಾಗ ಆಗ್ನೇಯ ವಿಭಾಗದ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸಲಾಗಿದೆ. ಕೂಡಲೇ ಗಸ್ತು ತಿರುಗುತ್ತಿದ್ದ ಅಧಿಕಾರಿಗಳು ಠಾಣೆಗೆ ಧಾವಿಸಿದ್ದು, ಗುಂಪು ಚದುರಿಸಲು ಹರಸಾಹಸ ಪಟ್ಟಿದ್ದಾರೆ.
ನಂತರ ಸ್ಥಳದಿಂದ ಹೊರದ ಮಂಗಳಮುಖಿಯರು ಹೊಸೂರು ಮುಖ್ಯ ರಸ್ತೆಯನ್ನು ಬೆಳಿಗ್ಗೆ 5 ಗಂಟೆಯವರೆಗೆ ತಡೆದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಪೊಲೀಸರು ಪವಿತ್ರ, ರಾಖಿ, ಭರಣಿ, ಪ್ರಮಿತಾ ರಾಮ್, ಮಲ್ಲಿಕಾ ಮತ್ತು ಮತ್ತೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಲ್ಲರೂ ಹತ್ತಿರದ ಕೊಳೆಗೇರಿ ನಿವಾಸಿಗಳಾಗಿದ್ದು, ಠಾಣೆಗೆ ಬಂದಾಗ ಮದ್ಯದ ಅಮಲಿನಲ್ಲಿದ್ದರು. ಪ್ರಕರಣ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.