ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಹೆಲಿಕಾಪ್ಟರ್ ಖರೀದಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸತೀಶ್ ಜಾರಕಿಹೊಳಿ ಅವರು ತಮ್ಮ ಹಳೆಯ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಅನ್ನು ಮಾರಾಟ ಮಾಡಿ, ಜರ್ಮನಿಯ ಅಗಸ್ಟಾ ಕಂಪೆನಿಯ ಆತ್ಯಾಧುನಿಕ ಡಬಲ್ ಇಂಜಿನ್ ಹೆಲಿಕಾಪ್ಟರ್ ಖರೀದಿಸಿದ್ದಾರೆ.
ಇಂದು ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್ನಲ್ಲಿ ತಮ್ಮ ಹೊಸ ಹೆಲಿಕಾಪ್ಟರ್ ಅನ್ನು ಸತೀಶ್ ಜಾರಕಿಹೊಳಿ ಅವರು ಪರಿಶೀಲಿಸಿದರು. ಪಕ್ಷ ಸಂಘಟನೆ, ಚುನಾವಣಾ ಸಿದ್ಧತೆಗೆ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ವಿಶೇಷ ಹೆಲಿಕಾಪ್ಟರ್
ಈ ಡಬಲ್ ಇಂಜಿನ್ ಹೆಲಿಕಾಪ್ಟರ್ ಆಧುನಿಕ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದ್ದು, ಐವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಪ್ರಯಾಣಿಸಬಹುದಾಗಿದೆ. ಚಾಪರ್ ಸೀಟ್ ಸೌಲಭ್ಯವಿರುವ ಈ ಹೆಲಿಕಾಪ್ಟರ್ ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುತ್ತದೆ. ಇದರ ಜೊತೆಗೆ, ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನೂ ಹೊಂದಿದೆ.
ಸತೀಶ್ ಜಾರಕಿಹೊಳಿ ಅವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ, ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದು, “ಶೀಘ್ರವೇ ನಮ್ಮ ಹೊಸ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧವಾಗಲಿದೆ,” ಎಂದು ಬರೆದುಕೊಂಡಿದ್ದಾರೆ. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನಮಣ್ಣರ ಮತ್ತು ಅಲಿ ಗೊರವನಕೊಳ್ಳ ಉಪಸ್ಥಿತರಿದ್ದರು.
ಇದರ ಬೆಲೆ ಎಷ್ಟು ಗೊತ್ತಾ?
ಆಧುನಿಕ ಸುರಕ್ಷಾ ವ್ಯವಸ್ಥೆ ಹೊಂದಿರುವ ಈ ಡಬಲ್ ಎಂಜಿನ್‌ನ ಹೆಲಿಕಾಪ್ಟರ್ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ಹೇಳಲಾಗುತ್ತಿದೆ.