ಬೆಂಗಳೂರು: ಜಾತಿ ಸಮೀಕ್ಷೆಯಲ್ಲಿ ಗೊಂದಲಗಳಿರುವ ಹಿನ್ನೆಲೆಯಲ್ಲಿ ಇಂದು ಒಕ್ಕಲಿಗ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಕ್ರಿಶ್ಚಿಯನ್ ಜೊತೆ ಒಕ್ಕಲಿಗರನ್ನು ಸೇರಿಸಬಾರದು. ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ. ಕ್ರಿಶ್ಚಿಯನ್ ಜೊತೆ ಒಕ್ಕಲಿಗ ಎಂದು ಸೇರಿಸಿರುವುದು ಸಮುದಾಯವನ್ನೇ ಕೆರಳುವಂತೆ ಮಾಡಿತ್ತು. ಹೀಗಾಗಿ ಸಭೆಯಲ್ಲಿ ಮೂರು ಪಕ್ಷಗಳ ನಾಯಕರಾದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವೆ ಶೋಭಾ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಜಾತಿಗಣತಿ ಸಮೀಕ್ಷೆ ಪಟ್ಟಿಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಗಿದ್ದು ಯಾರೂ ಗೊಂದಲ ಮಾಡಿಕೊಳ್ಳದಂತೆ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು. ಉಪ ಜಾತಿಯಲ್ಲೂ ಒಕ್ಕಲಿಗ ಎಂದೇ ನಮೂದಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಿರ್ಣಯವನ್ನು ನಿರ್ಮಲಾನಂದನಾಥ ಸ್ವಾಮೀಜಿಗಳು ಮಂಡಿಸಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಸದಾನಂದಗೌಡ ಸೇರಿ ಹಲವು ನಾಯಕರು ಅನುಮೋದನೆ ನೀಡಿದರು.