'ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ; ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ; ಕರ್ನಾಟಕವನ್ನು ರಕ್ಷಿಸಿ'

ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು. ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ.
HD Devegowda
ಎಚ್.ಡಿ ದೇವೇಗೌಡ
Updated on: 

ದೆಹಲಿ: ರಾಜ್ಯ ಎದುರಿಸುತ್ತಿರುವ ನೀರಾವರಿ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ಗದ್ಗದಿತರಾಗಿ ಮಾತಾನಾಡಿದ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ದಯಮಾಡಿ ಪರಿಹರಿಸಿ ಎಂದು ಕೇಂದ್ರ ಸರಕಾರವನ್ನು ಮನವಿ ಮಾಡಿಕೊಂಡರು.

ರಾಜ್ಯಸಭೆಯಲ್ಲಿ ಬುಧವಾರ ನಡೆದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾಜಿ ಪ್ರಧಾನಿಗಳು ಮಾತನಾಡಿದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಆ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ರಾಜ್ಯಸಭೆಯ ಹಿರಿಯ ಸದಸ್ಯರೂ ಆಗಿರುವ ಮಾಜಿ ಪ್ರಧಾನಿಗಳು ಕೇಂದ್ರ ಸರ್ಕಾರಕ್ಕೆ ಕೈಮುಗಿದು ವಿನಂತಿಸಿದರು.

ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ರಾಜ್ಯದ ನೀರಾವರಿ ಬಿಕ್ಕಟ್ಟನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು, ನನ್ನ ರಾಜ್ಯಸಭಾ ಅವಧಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನನ್ನ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಹಿತಕಾಯಿರಿ. ನಾವೆಲ್ಲರೂ ಮನುಷ್ಯರು. ಮಳೆ ಬಿದ್ದರೆ ನೀರು, ಇಲ್ಲವಾದರೆ ಇಲ್ಲ. ಈ ಸದನದ ಎಲ್ಲಾ ಸದಸ್ಯರು ಕರ್ನಾಟಕದ ರಕ್ಷಣೆ ಮಾಡಬೇಕು ಎಂಬುದಾಗಿ ನಾನು ಕೈ ಮುಗಿದು ಬೇಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಮನವಿ ಮಾಡಿದರು.

HD Devegowda
ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ: ಬಜೆಟ್ ಅನುದಾನ ಕುರಿತು ಚರ್ಚೆ!

ಕರ್ನಾಟಕ ನಿರಂತರವಾಗಿ ನೆರೆ ರಾಜ್ಯಗಳ ಜೊತೆ ನೀರಾವರಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ನಾನು ಕೂಡ ನೀರಿಗಾಗಿ 65 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸದನದಲ್ಲಿ ನಾನು ನ್ಯಾಯಮಂಡಳಿಗಳು ನೀಡಿರುವ ತೀರ್ಪುಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಕರ್ನಾಟಕ ರಾಜ್ಯಕ್ಕೆ ನೀರಿನದ್ದೇ ಬಹುದೊಡ್ಡ ಬಿಕ್ಕಟ್ಟಾಗಿದೆ. ಒಂದೆಡೆ ತಮಿಳುನಾಡು, ಮತ್ತೊಂದೆಡೆಯಲ್ಲಿ ಆಂಧ್ರಪ್ರದೇಶ, ಇನ್ನೊಂದು ಕಡೆಯಲ್ಲಿ ಗೋವಾದಿಂದ ತೊಂದರೆ ಎದುರಿಸುತ್ತಿದೆ. ನಾನು ಜೀವನದ ಕೊನೆಗಾಲದಲ್ಲಿ ಇದ್ದೇನೆ. ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ ಎಂದು ಮನವಿ ಮಾಡಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com